ಬೆಂಗಳೂರು:ಹೊಸ ವರ್ಷಾಚರಣೆ ದಿನದಂದೇ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜಿರಿಯಾ ಮೂಲದ ಕೆಲ್ವಿನ್ ಬಂಧಿತ ವಿದೇಶಿ ಪ್ರಜೆ.
ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ಭೀಮಪ್ಪ ಎಂಬುವರ ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ನಾಗರಾಜ್ ಮೂರು ವರ್ಷಗಳಿಂದ ಗೋವಿಂದಪುರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ರಾತ್ರಿ ಹೆಚ್ಬಿಆರ್ ಬಡಾವಣೆ ಬಳಿ ಇತರ ಸಿಬ್ಬಂದಿಯೊಂದಿಗೆ ನಾಗರಾಜ್ ಗಸ್ತು ಕಾರ್ಯದಲ್ಲಿದ್ದರು. ಮಧ್ಯರಾತ್ರಿ 1.50 ಸುಮಾರಿಗೆ ಪತ್ನಿಯೊಂದಿಗೆ ಕೆಲ್ವಿನ್ ಬರುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಪೊಲೀಸರು ಪ್ರಶ್ನಿಸಿದ್ದರು. ಕುಡಿದ ನಶೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಜೋರಾಗಿ ಕಿರುಚಿ, ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಈ ಬಗ್ಗೆ ಪ್ರಶ್ನಿಸಿದ ಕಾನ್ಸ್ಟೇಬಲ್ ನಾಗರಾಜ್ ಅವರಿಗೆ ಏಕಾಏಕಿ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ತಪ್ಪಿಸಿಕೊಳ್ಳುವ ಬರದಲ್ಲಿ ನಾಗರಾಜ್ ಅವರ ಕಣ್ಣಿನ ಹುಬ್ಬಿಗೆ ಗಾಯವಾಗಿದೆ. ಆರೋಪಿಯು ಕೃತ್ಯವೆಸಗುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ. ಹಲ್ಲೆಗೊಳಗಾದ ಕಾನ್ಸ್ಟೇಬಲ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಆರೋಪಿ ವಿರುದ್ಧ ಈಗಾಗಲೇ ಡಿಜೆ ಹಳ್ಳಿ, ಹೆಣ್ಣೂರು ಠಾಣೆಗಳಲ್ಲಿ ವಿದೇಶಿ ಕಾಯ್ದೆ ಹಾಗೂ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ, ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿವೆ. ಆರೋಪಿಯು ಬಟ್ಟೆ ವ್ಯಾಪಾರ ಮಾಡುವುದಾಗಿ ಹೇಳುತ್ತಿದ್ದು, ಟಿನ್ ಫ್ಯಾಕ್ಟರಿಯ ಬಿ.ನಾರಾಯಣಪುರದಲ್ಲಿ ವಾಸವಾಗಿದ್ದ. ಆರೋಪಿತನ ಪತ್ನಿಯು ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ಮಹಿಳಾ ಪೊಲೀಸ್ ಬೆರಳನ್ನು ಕಚ್ಚಿದ ಆರೋಪದ ಮೇಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಳ್ಳಾರಿ: ಬಿಮ್ಸ್ ಆಸ್ಪತ್ರೆ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಅಧಿಕಾರಿ ವಿರುದ್ಧ FIR