ದಾವಣಗೆರೆ:ಆಧಾರರಹಿತ ಬಿಪಿಎಲ್ ಕಾರ್ಡ್ ಪತ್ತೆಗೆ ಆಹಾರ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಆಧಾರರಹಿತ ಬಿಪಿಎಲ್ ಕಾರ್ಡ್‌ಗಳನ್ನು ಕಂಡುಹಿಡಿಯಲಾಗಿದೆ. ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಬಡವರಿಗೆ ಸೇರಬೇಕಾದ ಕಾರ್ಡ್ ಅನ್ಯರ ಪಾಲಾಗುತ್ತಿದೆ. ಆಹಾರ ಇಲಾಖೆ ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ. ಮೂರು ಹೆಕ್ಟೇರ್ ಕೃಷಿ ಭೂಮಿ, 1.20 ಲಕ್ಷ ರೂ.ಗೂ ಹೆಚ್ಚು ಆದಾಯ ಹೊಂದಿದವರು, ಆದಾಯ ತೆರಿಗೆ ಪಾವತಿಸುವವರು ಹಾಗು ಸರ್ಕಾರಿ ನೌಕರರು ದಾವಣಗೆರೆಯಲ್ಲಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ.
ಆಧಾರರಹಿತ ಬಿಪಿಎಲ್ ಕಾರ್ಡ್ಗಳ ಅಂಕಿಅಂಶ: ಜಿಲ್ಲೆಯಲ್ಲಿ ಮೊದಲಿಗೆ, ಬಿಪಿಎಲ್ ಕಾರ್ಡ್ಗಳಲ್ಲಿ 4,900 ಜನ ಮರಣ ಹೊಂದಿದವರನ್ನು ಇಲಾಖೆ ತೆಗೆದು ಹಾಕಿದೆ. ಸತತ ಆರು ತಿಂಗಳುಗಳಿಂದ ಯಾರು ಬಿಪಿಎಲ್ ಕಾರ್ಡ್ದಾರರು ಪಡಿತರ ಪಡೆದಿಲ್ಲವೋ ಅಂತಹ 4,932 ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. 39,693 ಬಿಪಿಎಲ್ ಕಾರ್ಡ್ದಾರರು 1 ಲಕ್ಷ 20 ಸಾವಿರ ರೂ ಆದಾಯದ ಮಾನದಂಡ ಮೀರಿರುವವರ ಅಂಕಿಅಂಶಗಳು ಅಧಿಕಾರಿಗಳ ಕೈಸೇರಿದೆ. ಇದನ್ನು ಇಲಾಖೆ ಪ್ರತಿ ತಾಲೂಕುಗಳ ಫುಡ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸುತ್ತಿದೆ.
ಆದಾಯ ತೆರಿಗೆ ಪಾವತಿಸುತ್ತಿರುವ ಒಟ್ಟು 2,354 ಬಿಪಿಎಲ್ ಕಾರ್ಡ್ದಾರರ ಮಾಹಿತಿ ಕೂಡ ಲಭ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 68 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್‌ದಾರರಿದ್ದಾರೆ. HRMS ಮೂಲಕ ಅಧಿಕಾರಿಗಳು ಮಾಹಿತಿ ಪಡೆದಿದ್ದು, ಬಿಪಿಎಲ್ ಕಾರ್ಡ್ ಪಡೆದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಈ ಎಲ್ಲ ಕಾರ್ಡ್ದಾರರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡುತ್ತೇವೆ. ಬಳಿಕ ಇಲಾಖೆ ಸರ್ಕಾರದ ನಿರ್ದೇಶನದಂತೆ ಸಸ್ಪೆಂಡ್ ಮಾಡುವುದಾ ಅಥವಾ ರದ್ದುಗೊಳಿಸಬೇಕಾ ಎಂಬ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆಹಾರ ಇಲಾಖೆಯ ಡಿಡಿ ಸಿದ್ದರಾಮ ಮಾರಿಹಾಳ ಮಾಹಿತಿ ನೀಡಿದರು.