ETV Bharat Karnataka

ಕರ್ನಾಟಕ

karnataka

ETV Bharat / state

ಜೆಡಿಎಸ್‌ - ಬಿಜೆಪಿ ಮೈತ್ರಿಗೆ ನೀವೇ ಕಾರಣ ಮಿಸ್ಟರ್‌ ಡಿ ಕೆ ಶಿವಕುಮಾರ್‌ : ಆಕ್ರೋಶ ವ್ಯಕ್ತಪಡಿಸಿದ ಹೆಚ್​ಡಿಕೆ - H D Kumaraswamy

ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳೊದಕ್ಕೆ ಮೂಲ ಕಾರಣವೂ ನೀವೇ ಎಂದು ಡಿ ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
author img

By ETV Bharat Karnataka Team

Published : Mar 19, 2024, 7:35 PM IST

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು :ಆರಂಭದಿಂದಲೂ ನಾವು 3 ಕ್ಷೇತ್ರಗಳನ್ನು ಕೇಳಿದ್ದೇವೆ. ಅದನ್ನು ಹೊರತುಪಡಿಸಿದರೆ ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ಕಂಡಿದ್ದಾರೆ. ಇದನ್ನೇ ಕಾಂಗ್ರೆಸ್‌ ಪಕ್ಷದ 'ಸೋಕಾಲ್ಡ್‌ ಟ್ರಬಲ್‌ ಶೂಟರ್‌', ಹಿಂದೆ ನಮ್ಮ ಮೈತ್ರಿ ಸರ್ಕಾರವನ್ನು ತೆಗೆದಿದ್ದವರು ನಮ್ಮ ಕಾರ್ಯಕರ್ತರ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ. ಯಾವನಿಗೆ ಬೇಕು ಇವರ ಅನುಕಂಪ? ನಮ್ಮ ಕಾರ್ಯಕರ್ತರಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಕೆ ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‌-ಬಿಜೆಪಿ ಮೈತ್ರಿಯ ಬಗ್ಗೆ ಸೋಮವಾರ ನಮ್ಮ ಪಕ್ಷದ ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ. ನಮ್ಮ ಪಕ್ಷದಿಂದ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಹೋಗಬೇಕು ಎಂದು ಹೇಳಿದ್ದೆವು. ಆ ಸಭೆಯಲ್ಲಿ ಪ್ರಮುಖವಾಗಿ ಏನೇನು ಚರ್ಚೆ ಆಗಿತ್ತು ಎಂಬುದನ್ನು ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಅಂದ ಮಾತ್ರಕ್ಕೆ ನಮಗೆ ಬಿಜೆಪಿ ಮೇಲೆ ವಿಶ್ವಾಸ ಹೋಗಿದೆ ಅಂತ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌-ಬಿಜೆಪಿ ಮೈತ್ರಿಗೆ ನೀವೇ ಕಾರಣ- ಹೆಚ್​ಡಿಕೆ : ''ಮಿಸ್ಟರ್‌ ಡಿ ಕೆ ಶಿವಕುಮಾರ್‌, ಇವತ್ತು ಜೆಡಿಎಸ್‌ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ನೀವು. ನಿಮ್ಮಿಂದಲೇ ಈ ಮೈತ್ರಿ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಮೂಲ ಕಾರಣವೂ ನೀವೇ. ಹಿಂದೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಆದಾಗ ಈ ಸರ್ಕಾರ ಐದು ವರ್ಷ ಇರಬೇಕು ಎಂದು ಹೇಳಿದ್ದಿರಿ. ಆದರೆ ಪಕ್ಕದಲ್ಲೇ ಕೂತು ಬಿಲ ಕೊರೆದಿರಿ'' ಎಂದು ಕುಮಾರಸ್ವಾಮಿ ಆರೋಪಿಸಿದರು.

''ಅಧಿಕಾರವನ್ನೂ, ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷವನ್ನೇ ರಾಮನಗರದಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಿರಿ. ಆಗ ಮಂಡ್ಯದಲ್ಲಿ ದೋಖಾ ಮಾಡಿ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲುವಂತೆ ಮಾಡಿದಿರಿ. ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಮ್ಮ ಕಾರ್ಯಕರ್ತರು ಇದನ್ನೇ ಮಾಡಿದ್ದಿದ್ದರೆ ಆತನೂ ಮನೆಯಲ್ಲಿ ಕೂರಬೇಕಿತ್ತು. ಮೈತ್ರಿಗೆ ನಾವು ಮೋಸ ಮಾಡಲಿಲ್ಲ'' ಎಂದು ಹೆಚ್​ಡಿಕೆ ಹೇಳಿದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

''ಬಿಜೆಪಿ ಜತೆ 20 ತಿಂಗಳು ಸರ್ಕಾರ ಮಾಡಿದ್ದರಿಂದ ನಾನು ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಆದರೆ ನಿಮ್ಮ ಜತೆ 14 ತಿಂಗಳ ಮೈತ್ರಿಯಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇನೆ. ರಾಜಕೀಯವಾಗಿ ನೀವು ವಿಷ ಹಾಕಿ ನಮ್ಮನ್ನು ಕೊಂದಿದ್ದೀರಿ. ಹಂತ ಹಂತವಾಗಿ ನಮ್ಮನ್ನು ಕುಗ್ಗಿಸಿದ್ದೀರಿ. 14 ತಿಂಗಳು ನಿಮ್ಮ ಜತೆ ಸರ್ಕಾರ ಮಾಡಿದ್ದು ನಾನು ತೆಗೆದುಕೊಂಡ ಅತ್ಯಂತ ಕೆಟ್ಟ ನಿರ್ಧಾರ. ದೇವೇಗೌಡರ 60 ವರ್ಷಗಳ ಸುದೀರ್ಘ ರಾಜಕಾರಣಕ್ಕೆ ಕೊಳ್ಳಿ ಇಟ್ಟಿದ್ದೀರಿ. ನನ್ನ ಜತೆ ಇದ್ದವರನ್ನು ಖರೀದಿ ಮಾಡುತ್ತಿದ್ದೀರಿ'' ಎಂದು ಕುಮಾರಸ್ವಾಮಿ ಅವರು ಡಿ ಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

''ಬಿಜೆಪಿಯಲ್ಲಿ ನನಗೆ ಗೌರವ ಕೊಟ್ಟಿದ್ದಾರೆ. ಅವರು ನಿಮ್ಮ ಹಾಗೆ ನನ್ನ ಕುತ್ತಿಗೆ ಕೊಯ್ದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ತೋಳ್ಬಲ, ಧನಬಲ, ಅಧಿಕಾರ ಬಲದಿಂದ ಮೆರೆಯಿತ್ತಿದ್ದೀರಿ. ನನ್ನ ಪಕ್ಷದ ಶಾಸಕರನ್ನು ಸೆಳೆಯೋದಕ್ಕೆ ನೀವು ಏನೆಲ್ಲ ಮಾಡಿದ್ದಿರಿ ಎನ್ನುವುದು ಗೊತ್ತಿದೆ ನನಗೆ. ಇವತ್ತಿಗೂ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದೀರಿ. ನೀವು ನಮ್ಮನ್ನು ಮುಗಿಸಲು ಹಂತ ಹಂತವಾಗಿ ಏನೆಲ್ಲಾ ಮಾಡುತ್ತಿದ್ದೀರಾ ಎನ್ನುವ ಮಾಹಿತಿ ನನಗೆ ಇದೆ. ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವ ದಿನಗಳು ಹತ್ತಿರಕ್ಕೆ ಬಂದಿವೆ'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ : ''ಮಂಡ್ಯ ಕ್ಷೇತ್ರದಲ್ಲಿ ಕೂಡ ಒಂದು ಕೋಟಿ ರೂಪಾಯಿ ಸೀಜ್ ಆಗಿದೆ. ಈ ಹಣ ಅಡಿಕೆ ವ್ಯಾಪಾರದ್ದು ಎಂದು ಹೇಳಿಕೊಂಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಷ್ಟು ಹಣ ದುಡಿಯುವ ಅಡಿಕೆ ವ್ಯಾಪಾರಿಗಳಿದ್ದಾರಾ? ಎಂದು ನನಗೆ ಅಚ್ಚರಿ ಉಂಟಾಯಿತು. ಇದು ಕೂಡ ಕಾಂಗ್ರೆಸ್‌ ಅಭ್ಯರ್ಥಿ ಹಣವೇ ಆಗಿದೆ. ಅಲ್ಲಿಯೂ ಕಾಂಗ್ರೆಸ್‌ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ'' ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ, ಹಿರಿಯ ಮುಖಂಡರಾದ ಗೊಟ್ಟಿಗೆರೆ ಮಂಜುನಾಥ್‌, ಎ ಪಿ ರಂಗನಾಥ್‌ ಸೇರಿದಂತೆ ಪಕ್ಷದ ಹಲವಾರು ನಾಯಕರು ಹಾಜರಿದ್ದರು.

ಇದನ್ನೂ ಓದಿ :ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ: ಹೆಚ್ ಡಿ‌ ಕುಮಾರಸ್ವಾಮಿ

ABOUT THE AUTHOR

...view details