ಬೆಳಗಾವಿ: "ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೋಂಧಳಿ ಕಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಕಲೆಯನ್ನು ಗುರುತಿಸಿ ಈಗ ನನಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಿಂದಾಗಿ ಖುಷಿ ಒಂದು ಕಡೆಯಾದರೆ, ಮೋದಿಯವರು ನಮ್ಮ ಕಲೆಗೆ ಗೌರವ ನೀಡಿರುವುದು ಮತ್ತಷ್ಟು ಸಂತಸ ತಂದಿದೆ" ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದ ಡಾ. ವೆಂಕಪ್ಪ ಅಂಬಾಜಿ ಸುಗತೇಕರ್ ಹೇಳಿದರು.
ಜ.26ರಂದು ದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಾ. ವೆಂಕಪ್ಪ ಸುಗತೇಕರ್ ಅವರನ್ನು ಅವರ ಕುಟುಂಬಸ್ಥರು ಬರಮಾಡಿಕೊಂಡರು. ಇದೇ ವೇಳೆ 'ಈಟಿವಿ ಭಾರತ್' ಜೊತೆಗೆ ಮಾತನಾಡಿದ ಅವರು, "ನಮ್ಮ ಹಿರಿಯರ ಕಾಲದಿಂದ ಗೋಂಧಳಿ ಹಾಡುತ್ತಾ ಬಂದಿದ್ದೇವೆ. ಹಳ್ಳಿಗಳನ್ನು ಸುತ್ತಿ ಪದಗಳನ್ನು ಹಾಡುವುದು, ಕಥೆ ಕಟ್ಟುವುದು, ಕಥೆ ಹೇಳುವುದೇ ನಮ್ಮ ನಿತ್ಯದ ಕಾಯಕ. ಹಳ್ಳಿಗಳಲ್ಲಿ ಗ್ರಾಮಸ್ಥರು ಗೋಂಧಳಿ ಕಥೆ ಹಚ್ಚುತ್ತಿದ್ದರು. ನಾವು ಅತ್ಯಂತ ಭಕ್ತಿಯಿಂದ ಹಾಡುತ್ತಿದ್ದೆವು . ಕಥೆ ಹೇಳುತ್ತಿದ್ದೆವು . ಎಲ್ಲರೂ ಹಾಡು - ಕಥೆ ಕೇಳಿ ಆನಂದಿಸುತ್ತಿದ್ದರು. ಅದು ಈಗಲೂ ಮುಂದುವರಿದಿದೆ. ಈಗ ನಾನು ಇಷ್ಟೆಲ್ಲ ಸೇವೆ ಮಾಡಿದ್ದಕ್ಕೂ ಸಾರ್ಥಕತೆ ಸಿಕ್ಕಂತೆ ಆಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಸಾಧು - ಸಂತರ ಸಾವಿರಾರು ಹಾಡು ಹಾಡಿದ್ದೇನೆ:"ದಾಸರು, ಶಿಶುನಾಳ ಷರೀಫರು, ಅಂಬಾ ಭವಾನಿ, ಯಲ್ಲಮ್ಮದೇವಿ ಸೇರಿ ಅನೇಕ ಸಾಧು - ಸಂತರ ಸಾವಿರಾರು ಹಾಡು ಹಾಡಿದ್ದೇನೆ. ನೂರಾರು ಕಥೆಗಳನ್ನು ಹೇಳಿದ್ದೇನೆ. ನಮ್ಮ ಹಿರಿಯರ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಪತಿವ್ರತೆ, ಧರ್ಮ, ಪದ್ಧತಿ, ಸಂಸ್ಕಾರ, ಸಂಸ್ಕೃತಿಗಳ ಕುರಿತು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ" ಎಂದರು.
"ರಾತ್ರಿ 9ಕ್ಕೆ ಶುರುವಾಯಿತು ಎಂದರೆ ಬೆಳಗ್ಗೆ 5.30ರವರೆಗೆ ನಿರಂತರವಾಗಿ ಪದಗಳನ್ನು ನಿಂತುಕೊಂಡೇ ಹಾಡುತ್ತೇವೆ. ಗೋಂಧಳ ಎಂದರೆ ನಿಂತೇ ಹಾಡುವುದು. ಈಗ ನನಗೆ 82 ವರ್ಷ ವಯಸ್ಸು. ಮೊಣಕಾಲು ನೋವು ಇರುವುದರಿಂದ ನಡುವೆ ಒಂದು ಗಂಟೆ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆದು ಮತ್ತೆ ಎದ್ದು ನಿಂತು ಹಾಡುತ್ತೇನೆ. ಈಗ ಬರುವ ಮಂಗಳವಾರ ಗೋಂಧಳವಿದೆ. ಅಂದು ನಾನು ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುತ್ತಲೇ, ನನಗೆ ವಯಸ್ಸಾಗಿದೆ. ಆದರೆ, ನನ್ನಲ್ಲಿನ ಕಲೆಗೆ ವಯಸ್ಸಾಗಿಲ್ಲ" ಎಂದು ಡಾ.ವೆಂಕಪ್ಪ ಸುಗತೇಕರ್ ನಿರೂಪಿಸಿದರು.
"ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ಅವರು ನಮ್ಮ ಗೋಂಧಳಿ ಕಲೆ ಗುರುತಿಸಿ ನನ್ನ ಬಗ್ಗೆ ಮಾತಾಡಿದ್ದು, ಕೇಳಿ ತುಂಬಾ ಸಂತೋಷವಾಗಿತ್ತು. ಈಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೆಹಲಿಯಿಂದ ಆಹ್ವಾನ ಬಂದಿತ್ತು. ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಕೇಂದ್ರದ ಅನೇಕ ನಾಯಕರನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ಸಿಕ್ಕಿತು" ಎಂದು ಹೇಳಿದರು.