ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಜನವರಿ 1ರ ವರೆಗೆ ಏಷ್ಯಾದ ಅತಿದೊಡ್ಡ ಗ್ಲಾಸ್ಹೌಸ್ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಸೇವಂತಿಗೆ, ಗುಲಾಬಿ ಸೇರಿದಂತೆ ಐದು ವಿವಿಧ ಬಣ್ಣದ ಹೂವುಗಳಿಂದ 30 ಅಡಿ ಉದ್ದ, 13 ಅಡಿ ಅಗಲದ ಹಳೇ ಸಂಸತ್ ಭವನವನ್ನು 20 ಜನ ಕಲಾವಿದರು ನಿರ್ಮಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕಲ್ಲಂಗಡಿ ಹಣ್ಣಿನಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಶಿವಕುಮಾರ ಸ್ವಾಮೀಜಿ, ಕನ್ನಡ ಜ್ಞಾನಪೀಠ ಪುರಸ್ಕೃತರು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಗಳು ಮೂಡಿಬಂದಿವೆ.
ಫಲಪುಷ್ಪ ಪ್ರದರ್ಶನ (ETV Bharat) ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ಗ್ಯಾಲರಿಯನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಅಂಬೇಡ್ಕರ್ ಅವರು ಬೆಳೆದು ಬಂದ ಹಾದಿ, ಅವರ ಕುಟುಂಬ, ವ್ಯಾಸಂಗದ ಮಾಹಿತಿ ಇದೆ. ಇದರ ಜೊತೆಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಕಲಾಕೃತಿಗಳ ಮುಂದೆ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬುದ್ಧನ ಮೂರ್ತಿ (ETV Bharat) ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾತನಾಡಿ, "ಐದು ವಿವಿಧ ಬಣ್ಣಗಳ 15 ಲಕ್ಷ ಹೂವು ಬಳಸಿ ಹಳೆಯ ಸಂಸತ್ ಭವನ ನಿರ್ಮಾಣ ಮಾಡಿದ್ದೇವೆ. ಇದು 30 ಅಡಿ ಉದ್ದ, 13 ಅಡಿ ಅಗಲ ಇದೆ. ಅಲ್ಲದೆ ಸಂಸತ್ ಭವನದ ಅಲಂಕಾರಕ್ಕೆ 15 ಸಾವಿರ ಪಾಟ್ಗಳನ್ನು ಬಳಕೆ ಮಾಡಲಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಸಮಾನತೆಯ ಥೀಮ್ ಇಟ್ಟುಕೊಂಡು ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದೇವೆ. ಇಂದಿನಿಂದ ಜ.1ರ ತನಕ ಫಲಪುಷ್ಪ ಪ್ರದರ್ಶನ ಇರಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ" ಎಂದರು.
ಮಹನೀಯರ ಪುತ್ಥಳಿಗಳು (ETV Bharat) ಹೂವುಗಳಿಂದ ಮೂಡಿಬಂದಿರುವ ಹಳೇ ಸಂಸತ್ ಭವನ (ETV Bharat) ಸ್ಥಳೀಯರಾದ ವಿಜಯ ಮಾತನಾಡಿ,"ಹೂವಿನಲ್ಲಿ ಹಳೆ ಸಂಸತ್ ಭವನ ಚೆನ್ನಾಗಿ ಮೂಡಿಬಂದಿದೆ. ಸೇವಂತಿಗೆ, ಸುಗಂಧ ರಾಜ ಹೂವಿನಿಂದ ಅಲಂಕಾರ ಮಾಡಿದ್ದಾರೆ. ತರಕಾರಿ, ಹಣ್ಣುಗಳಿಂದ ಮಹನೀಯರ ಭಾವಚಿತ್ರ ಮೂಡಿಬಂದಿದೆ. ಫಲಪುಷ್ಪ ಪ್ರದರ್ಶನ ನೋಡಿ ತುಂಬ ಸಂತಸವಾಯಿತು" ಎಂದು ಹೇಳಿದರು.
ತರಕಾರಿಯಿಂದ ಮಾಡಿದ ಕಲಾಕೃತಿ (ETV Bharat) ಇದನ್ನೂ ಓದಿ:ಕಂಬಳ ಕೋಣದ ಬಗ್ಗೆ ನಿಮಗೆಷ್ಟು ಗೊತ್ತು? ಇದಕ್ಕೆ ಸಿಗುವ ರಾಜಾತಿಥ್ಯ ಮನುಷ್ಯರಿಗೂ ಸಿಗಲ್ಲ!