ಚಾಮರಾಜನಗರ:ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಸಫಾರಿ ವೇಳೆ ಏಕಕಾಲದಲ್ಲಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಳ್ಳುವ ಮೂಲಕ ವರ್ಷಾಂತ್ಯದಲ್ಲಿ ಸಫಾರಿಪ್ರಿಯರು ಖುಷಿಪಟ್ಟರು.
ಬಂಡೀಪುರ ಸಫಾರಿ ವಲಯ ವ್ಯಾಪ್ತಿಯ ಮೂರುಕೆರೆ ಬಳಿಯಲ್ಲಿ ತನ್ನ ಮರಿಗಳೊಂದಿಗೆ ತಾಯಿ ಹುಲಿ ಹೆಜ್ಜೆ ಹಾಕಿತು. ಈ ದೃಶ್ಯವನ್ನು ಮಂಗಳವಾರ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ (Social Network) ''ಹಲವು ದಿನಗಳ ಹಿಂದೆ ಗರ್ಭ ಧರಿಸಿದ ಹೊತ್ತಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ವರ್ಷದ ಕೊನೇಯ ದಿನ ದರ್ಶನ ನೀಡಿದೆ'' ಎಂದು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದರು.
ಸಫಾರಿಗೆ ಪ್ರವಾಸಿಗರ ದಂಡು: ಬಂಡೀಪುರ ಸಫಾರಿಗೆ ವರ್ಷಾಂತ್ಯದ ಕೊನೇಯ ದಿನವಾದ ಮಂಗಳವಾರ ಪ್ರವಾಸಿಗರ ದಂಡೇ ಆಗಮಿಸಿತ್ತು. ಬೆಳಗ್ಗೆ ಮತ್ತು ಸಂಜೆಯ ವೇಳೆ ಅಧಿಕ ಸಂಖ್ಯೆಯಲ್ಲಿ ಕುಟುಂಬಸಮೇತರಾಗಿ ಜನರು ಬರುತ್ತಿದ್ದು, ಆನ್‌ಲೈನ್ ಮೂಲಕ ಸಾಕಷ್ಟು ಟಿಕೆಟ್ ಖರೀದಿಯಾಗಿವೆ. ಪರಿಸರ ಹಚ್ಚ ಹಸಿರಾಗಿದ್ದು, ವನ್ಯಲೋಕದಲ್ಲಿ ಹಲವರು ವರ್ಷಾಂತ್ಯದ ಖುಷಿ ಕಂಡರು.
ಇದನ್ನೂ ಓದಿ:ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು? ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ? - Global Tiger Population - GLOBAL TIGER POPULATION