ವಿಜಯಪುರ: ಕ್ಯಾಂಟರ್ ಅಡ್ಡಗಟ್ಟಿ, ಅದರಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ 32 ಲಕ್ಷ ರೂ. ಹಣ ದೋಚಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾಣೆ ತಿಳಿಸಿದರು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕ್ಯಾಂಟರ್ ಚಾಲಕ ಮಹಾಂತೇಶ ತಳವಾರ ಸೇರಿದಂತೆ ಧರೇಶ ದಳವಾಯಿ, ಶಿವಪ್ಪ ಮಾಶ್ಯಾಳ, ಸುನೀಲ ವಡ್ಡರ, ಶಿವಾನಂದ ದಳವಾಯಿ ಎಂಬವರನ್ನು ಬಂಧಿಸಲಾಗಿದೆ.
ಎಸ್ಪಿ ರಿಷಿಕೇಶ್ ಸೋನವಾಣೆ ಮಾತನಾಡಿ, ಮೇ.17 ರಂದು ಜೇವರ್ಗಿಯ ಚಂದ್ರಕಾಂತ ಗುರುಪಾದಪ್ಪ ಕುಂಬಾರ ಇವರಿಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನಬಾವಿಯಲ್ಲಿರುವ ಅನೀಲಕುಮಾರ ಕಂಪನಿಗೆ ಮಾರಾಟ ಮಾಡಿ 32,29,364 ರೂಪಾಯಿ ಹಣ ತೆಗೆದುಕೊಂಡು ಕ್ಯಾಂಟರ್ ಚಾಲಕ ಮಹಾಂತೇಶ ವಾಪಸ್ ಬರುತ್ತಿದ್ದನು. ಈತನನ್ನು ಬೆನ್ನಟ್ಟಿ ಬಂದಿದ್ದ ಆರೋಪಿಗಳು ಕೊಲ್ಹಾರ ಪಟ್ಟಣದ ಉಪ್ಪಲದಿನ್ನಿ ಕ್ರಾಸ್ ಬಳಿ ಕ್ಯಾಂಟರ್ ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಕೃತ್ಯದಲ್ಲಿ ಶಾಮೀಲಾಗಿದ್ದ ಕ್ಯಾಂಟರ್ ಚಾಲಕ ಸೇರಿ ಐವರನ್ನು ಬಂಧಿಸಲಾಗಿದೆ. ಸುಲಿಗೆಯಾದ ಹಣದ ಪೈಕಿ 31,04,364 ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಖೊಟ್ಟಿ ದಾಖಲೆ ಸೃಷ್ಟಿ, 6 ಆರೋಪಿಗಳ ಬಂಧನ:ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಿದ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಬಾನಗರ ನಿವಾಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರಿಗೆ ವಂಚಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.