ಬೆಂಗಳೂರು :ನಗರದ ಹೊರವಲಯದ ಫಾರ್ಮ್ ಹೌಸ್ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ರೇವ್ ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ ಸಹ ಭಾಗಿಯಾಗಿದ್ದರು. ಆದರೆ, ಯಾವುದೇ ಜನಪ್ರತಿಧಿಗಳು ಭಾಗಿಯಾಗಿರಲಿಲ್ಲ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಪಾರ್ಟಿ ನಡೆಯುತ್ತಿರುವುದನ್ನು ತಿಳಿದುಕೊಂಡು ಸಿಸಿಬಿ ಪೊಲೀಸರು, ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಪತ್ತೆಗೆ ತರಬೇತಿ ಪಡೆದಿರುವ ಶ್ವಾನದಳದ ನೆರವು ಪಡೆಯಲಾಗಿದೆ. ನೂರಕ್ಕೂ ಅಧಿಕ ಜನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದಾಳಿ ವೇಳೆ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಘಟನಾ ಸ್ಥಳದ ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ.
ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ವಿಡಿಯೋ ಮಾಡಿರುವುದರ ಕುರಿತು 'ಅವರು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಆ ಬಗ್ಗೆ ಸಹ ತನಿಖೆ ಮಾಡಲಾಗುತ್ತಿದೆ. ಅಲ್ಲದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಅದರ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.