ಬೆಂಗಳೂರು: ಮದ್ಯಪಾನ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪವನ್ (24) ಹಾಗೂ ನಂದಗೋಪಾಲ್ (21) ಬಂಧಿತ ಆರೋಪಿಗಳು.
ಸೋಮವಾರ ರಾತ್ರಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಪುರ ಆಟದ ಮೈದಾನದ ಬಳಿ ಆರೋಪಿಗಳು ವೆಂಕಟೇಶ (45) ಎಂಬುವವರನ್ನು ಚಾಕು ಇರಿದು ಹತ್ಯೆ ಮಾಡಿದ್ದರು. ರಾತ್ರಿ ರಾಮಚಂದ್ರಪುರ ಆಟದ ಮೈದಾನದ ಕಡೆಗೆ ವಾಕಿಂಗ್ ಮಾಡಲು ಹೋಗುತ್ತಿದ್ದ ವೆಂಕಟೇಶ್, ವಾಟರ್ ಫೀಲ್ಡ್ ಟ್ಯಾಂಕ್ ಮುಂಭಾಗದ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಆರೋಪಿಗಳು ಬಿಯರ್ ಬಾಟಲ್ ಹಿಡಿದು, ಮದ್ಯಪಾನ ಮಾಡುತ್ತಾ ನಿಂತಿದ್ದನ್ನು ಗಮನಿಸಿದ್ದರು.
ಅದೇ ಏರಿಯಾದ ಪರಿಚಿತ ಯುವಕರಾಗಿದ್ದರಿಂದ 'ನಿಮಗಿನ್ನೂ ಚಿಕ್ಕ ವಯಸ್ಸು, ಮಧ್ಯಪಾನ ಮಾಡಬೇಡಿ' ಎಂದು ಬುದ್ಧಿಮಾತು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ವೆಂಕಟೇಶ್ ಅವರೊಂದಿಗೆ ಆರೋಪಿಗಳು ಜಗಳ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಪವನ್ ಕುಮಾರ್ ಚಾಕುವಿನಿಂದ ವೆಂಕಟೇಶ್ ಅವರ ಹೊಟ್ಟೆಗೆ ಬಲವಾಗಿ ಚುಚ್ಚಿದ್ದ. ಪರಿಣಾಮ, ತೀವ್ರ ರಕ್ತಸ್ರಾವದಿಂದ ವೆಂಕಟೇಶ್ ಮೃತಪಟ್ಟಿದ್ದರು. ಮೃತ ವೆಂಕಟೇಶ್ ಅವರ ಸಹೋದರನ ಮಗ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಹತ್ಯೆಗೆ ಸುಪಾರಿ ಪ್ರಕರಣ - ಮೂವರು ಅರೆಸ್ಟ್:ಮತ್ತೊಂದು ಅಪರಾಧ ಪ್ರಕರಣದಲ್ಲಿ ಮೂವರು ಅರೆಸ್ಟ್ ಆಗಿದ್ದಾರೆ. ಹಳೇ ವೈಷಮ್ಯದಿಂದ ಸಹೋದ್ಯೋಗಿಯ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಹಿತ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಾಂತ್ (30) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶ್ರೀಧರ್ (48), ಸಿದ್ದೇಶ್ (25) ಹಾಗೂ ನಿತೇಶ್ (24) ಬಂಧಿತ ಆರೋಪಿಗಳು.