ಮಂಗಳೂರು(ದಕ್ಷಿಣ ಕನ್ನಡ): ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೆನ್ಲಾಕ್ನಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇಂದು ಮೊದಲ ಬಾರಿಗೆ ಅಂಗಾಂಗ ದಾನ ನಡೆದಿದ್ದು, ಮೆದುಳು ನಿಷ್ಕ್ರಿಯವಾದ ಮಹಿಳೆಯ ಎರಡು ಕಣ್ಣು ಮತ್ತು ಲಿವರ್ ದಾನ ಪ್ರಕ್ರಿಯೆ ನಡೆಯಿತು.
ಶಿವಮೊಗ್ಗ ಜಿಲ್ಲೆಯ ರೇಖಾ (41) ಅವರ ಮೆದುಳು ನಿಷ್ಕ್ರಿಯವಾದ ಕಾರಣ ಅವರ ಅಂಗಾಂಗ ದಾನ ಮಾಡಲಾಯಿತು. ರೇಖಾ ಅವರಿಗೆ ಬ್ರೈನ್ ಟ್ಯೂಮರ್ ಇದ್ದಿದ್ದರಿಂದ ಶಿವಮೊಗ್ಗದ ಆಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಜನವರಿ 6ರಂದು ರೇಖಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರೇಖಾ ಅವರ ಮೆದುಳು ನಿಷ್ಕ್ರಿಯವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನದ ಸಲಹೆ ನೀಡಿದ್ದು, ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು.
ಡಿಎಂಒ ಪ್ರತಿಕ್ರಿಯೆ (ETV Bharat) ಅದರಂತೆ, ರೇಖಾ ಅವರ ಕಣ್ಣು ಮತ್ತು ಲಿವರ್ ತೆಗೆದು ದಾನ ಪ್ರಕ್ರಿಯೆ ನಡೆಸಲಾಯಿತು. ಎರಡು ಕಣ್ಣನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಲಿವರ್ ಅನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಮೂಲಕ ಮೃತ ಮಹಿಳೆ ರೇಖಾ ಮೂರು ಮಂದಿಯ ಬಾಳಿಗೆ ಬೆಳಕಾದರು.
ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್, ''ರೇಖಾ ಅವರು ಜನವರಿ 6ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರಿಯವಾದ ಪರಿಣಾಮ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಕಣ್ಣು ಮತ್ತು ಲಿವರ್ ದಾನ ಮಾಡಲಾಗಿದೆ. ಇದು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ನಡೆದ ಮೊದಲ ಅಂಗಾಂಗ ದಾನವಾಗಿದೆ'' ಎಂದರು.
ಇದನ್ನೂ ಓದಿ:ಮಂಗಳೂರು ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಮೆಟ್ಟಿಲಿನಿಂದ ಬಿದ್ದು ಸಾವು, ಅಂಗಾಂಗ ದಾನ - ORGAN DONATION