ಬೆಂಗಳೂರು: ದೀಪಾವಳಿಯ ಕೊನೆಯ ದಿನವಾದ ಇಂದು ಬಲಿಪಾಡ್ಯಮಿ ಹಬ್ಬವನ್ನು ನಗರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಸಾಲು ಸಾಲು ರಜೆ ಹಾಗೂ ವೀಕೆಂಡ್ನಲ್ಲಿ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ಊರುಗಳಿಗೆ ತೆರಳಿರುವುದು ಪಟಾಕಿ ವ್ಯಾಪಾರಸ್ಥರಿಗೆ ನಿರಾಸೆ ಮೂಡಿಸಿದೆ.
ಕೇವಲ ಹಸಿರು ಪಟಾಕಿಯನ್ನು ಅಧಿಕೃತ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತಿದ್ದು, ಕೆಲವೆಡೆ ಅನಧಿಕೃತ ವ್ಯಾಪಾರ ನಡೆದರೂ ಅದನ್ನು ಪಾಲಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹತೋಟಿಗೆ ತರುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಆದರೆ ವೀಕೆಂಡ್ ನೆಪದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ಮತ್ತು ಪ್ರವಾಸಿ ಸ್ಥಳಗಳಿಗೆ ತೆರಳಿರುವುದು ಲಕ್ಷ ಲಕ್ಷ ಬಂಡವಾಳ ಹಾಕಿರುವ ಪಟಾಕಿ ವ್ಯಾಪಾರಸ್ಥರಿಗೆ ನಷ್ಟ ಉಂಟಾಗಿದೆ.
ಈ ಕುರಿತು ಗಾಂಧಿನಗರದ ಮೈದಾನದಲ್ಲಿ ಪಟಾಕಿ ಅಂಗಡಿಯನ್ನು ಇಟ್ಟಿರುವ ಸಿ.ಎಂ.ಎಲ್ ದಿಲೀಪ್ 'ಈಟಿವಿ ಭಾರತ ಕನ್ನಡ'ದ ಜೊತೆ ಮಾತನಾಡಿ, "ಈ ಬಾರಿ ಹತ್ತು ಹಲವು ವಿಧದ ಪಟಾಕಿಯನ್ನು ತರಿಸಲಾಗಿತ್ತು. ಡ್ಯಾನ್ಸಿಂಗ್ ಮತ್ತು ರೊಟೇಟಿಂಗ್ ಸ್ಪಾರ್ಕಲ್, ಕ್ರ್ಯಾಕ್ಲಿಂಗ್ ಕ್ಯಾಂಡಿ, ಲಾಲಿಪಾಪ್ ಕ್ಯಾಂಡಿ, ಹಾರುವ - ನೆಗೆಯುವ ಹಲವು ರೀತಿಯ ಪಟಾಕಿಗಳನ್ನು ಮಕ್ಕಳಿಗಾಗಿ ತರಿಸಲಾಗಿತ್ತು. 50 ವಿಧದ ಫ್ಲವರ್ಪಾಟ್ಗಳು ಬಂದಿದ್ದವು. ಸುಮಾರು 5 ಸಾವಿರ ವಿಧದ ಪಟಾಕಿಗಳು ಈ ಬಾರಿ ಮಾರುಕಟ್ಟೆಗೆ ಬಂದಿದ್ದವು. ಆದರೆ ಈ ಬಾರಿ ಜನರು ಪಟಾಕಿ ಅಂಗಡಿಗಳ ಕಡೆಗೆ ಬರದಿರುವುದು ನಿರಾಶೆಯನ್ನುಂಟು ಮಾಡಿದೆ" ಎಂದು ಬೇಸರ ವ್ಯಕ್ತಪಡಿಸಿದರು.