ಬೆಂಗಳೂರು: ಸರ್ಕಾರಿ ನೌಕರಿಯ ಭರವಸೆ ನೀಡಿ ಖಾಸಗಿ ಕಂಪನಿ ಉದ್ಯೋಗಿಗೆ 28 ಲಕ್ಷ ರೂ. ವಂಚಿಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಪಾಳ್ಯ ನಿವಾಸಿ ಹೆಚ್.ಕೆ.ರಾಘವೇಂದ್ರ ಎಂಬವರು ನೀಡಿದ ದೂರಿನನ್ವಯ ದಾವಣಗೆರೆ ಮೂಲದ ರಾಘವೇಂದ್ರ, ಮಂಜುನಾಥ್, ಸುನೀತಾ ಬಾಯಿ, ಗಾಯತ್ರಿ, ಸಚಿನ್ ಹಾಗೂ ತಿಲಕ್ ಎಂಬವರ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಿಸಿದ್ದು ಹೇಗೆ?: ದೂರುದಾರ ರಾಘವೇಂದ್ರ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತ ಕಿರಣ್ ಎಂಬಾತನ ಮೂಲಕ ದಾವಣಗೆರೆ ಮೂಲದ ರಾಘವೇಂದ್ರ ಎಂಬಾತನ ಪರಿಚಯವಾಗಿತ್ತು. ಆರೋಪಿ ರಾಘವೇಂದ್ರ ತನಗೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಅಲ್ಲದೆ, ತನ್ನ ಸಹೋದರ ಮಂಜುನಾಥ್ ದಾವಣಗೆರೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿಸಿದ್ದ ಎಂದು ತಿಳಿದು ಬಂದಿದೆ.
ಆತನ ಮಾತು ನಂಬಿದ್ದ ರಾಘವೇಂದ್ರ ಸರ್ಕಾರಿ ಕೆಲಸ ಕೊಡಿಸಲು ಮುಂಗಡವಾಗಿ 2021ರ ಫೆ.22ರಂದು 2 ಲಕ್ಷ ರೂ. ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರ ಆರೋಪಿ ಹೇಳಿದಂತೆ ಹಂತಹಂತವಾಗಿ ಆತನ ಪತ್ನಿ ಸುನೀತಾ ಬಾಯಿ, ಸಹೋದರ ಮಂಜುನಾಥ್, ಆತನ ಪತ್ನಿ ಗಾಯತ್ರಿ, ಆರೋಪಿತನ ಪರಿಚಯಸ್ಥ ಸಚಿನ್ ಮತ್ತು ತಿಲಕ್‌ಗೆ ನಗದು ರೂಪದಲ್ಲಿ ಆರೋಪಿಗೆ ಒಟ್ಟು 28.40 ಲಕ್ಷ ರೂ. ನೀಡಿದ್ದರು. ಆದರೆ ನಂತರದಲ್ಲಿ ಆರೋಪಿ ಸರ್ಕಾರಿ ಕೆಲಸ ಕೊಡಿಸಿಲ್ಲ. ಈ ಬಗ್ಗೆೆ ಪ್ರಶ್ನಿಸಿದಾಗ ಆರೋಪಿಗಳೆಲ್ಲರೂ ಸೇರಿ ರಾಘವೇಂದ್ರ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: ಆದ್ದರಿಂದ ಸರ್ಕಾರಿ ಕೆಲಸದ ಭರವಸೆ ನೀಡಿ ವಂಚಿಸಿದ ರಾಘವೇಂದ್ರ ಮತ್ತು ಆತನ ಸಂಬಂಧಿಕರು, ಸ್ನೇಹಿತರ ವಿರುದ್ಧ ರಾಘವೇಂದ್ರ ದೂರು ನೀಡಿದ್ದಾರೆ. ದೂರಿನನ್ವಯ ಹಣ ವರ್ಗಾವಣೆಯಾಗಿರುವುದರ ಕುರಿತ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ದೂರುದಾರನಿಗೆ ಸೂಚಿಸಲಾಗಿದೆ, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಗೋಕಾಕ: ಬ್ಯಾಂಕ್ ಸಿಬ್ಬಂದಿ ವಿರುದ್ಧ 74 ಕೋಟಿ ರೂ ವಂಚನೆ ಆರೋಪ, ಠೇವಣಿದಾರರ ಆಕ್ರೋಶ - Bank Fraud Case