ಬೆಂಗಳೂರು:ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನ ಖರೀದಿಗಾಗಿ ಬರೋಬ್ಬರಿ 2.32 ಕೋಟಿ ರೂಪಾಯಿ ಸಾಲ ಪಡೆದಿದ್ದ ಆರೋಪದಡಿ ಐವರ ವಿರುದ್ಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿರುವ ದೂರಿನ ಅನ್ವಯ ಶಿವಣ್ಣ, ಅಚ್ಚುಕುಟ್ಟನ್.ಪಿ, ಮೊಹಮ್ಮದ್ ಫೈಯಾಜ್, ವೀರಭದ್ರಪ್ಪ ಹಾಗೂ ಸೈಯದ್ ಹಾಶೀಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಮಲ್ಲತ್ತಹಳ್ಳಿ ಗ್ರಾಮದಲ್ಲಿರುವ ಆಸ್ತಿಯನ್ನ ಶಿವಣ್ಣ ಎಂಬುವವರಿಂದ ಖರೀದಿಸಲು ಸಾಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಚ್ಚುಕುಟ್ಟನ್ ಅರ್ಜಿ ಸಲ್ಲಿಸಿದ್ದರು. ಅದರನ್ವಯ 2023ರ ಜನವರಿಯಲ್ಲಿ 1.16 ಕೋಟಿ ರೂ. ಸಾಲವನ್ನ ಬ್ಯಾಂಕ್ ಮಂಜೂರು ಮಾಡಿತ್ತು. ಸಾಲ ಮರುಪಾವತಿಸದಿದ್ದಾಗ ಬ್ಯಾಂಕ್‌ನಿಂದ ಅಚ್ಚುಕುಟ್ಟನ್‌ಗೆ ನೋಟಿಸ್ ಜಾರಿಯಾಗಿತ್ತು. ಆದರೆ ನೋಟಿಸ್ ಸ್ವೀಕೃತವಾಗದಿದ್ದಾಗ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಿವೇಶನ ಬೇರೆಯವರ ಹೆಸರಿನಲ್ಲಿರುವುದು ಪತ್ತೆಯಾಗಿದೆ.