ಬೆಂಗಳೂರು: ಅವಧಿ ಮೀರಿ ಗ್ರಾಹಕರಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಡಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಸೇರಿದಂತೆ ಮೂರು ರೆಸ್ಟೋರೆಂಟ್ಗಳ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸರ್ಕಾರದ ನಿಗದಿಪಡಿಸಿರುವ ನಿಯಮಗಳನ್ನ ಮೀರಿ ಕಾರ್ಯ ನಿರ್ವಹಿಸುತ್ತಿರುವ ರೆಸ್ಟೋರೆಂಟ್, ಬಾರ್, ಪಬ್ ವಿರುದ್ಧ ಜು.6ರಂದು ರಾತ್ರಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ, ಅವಧಿ ಮೀರಿದ ಬಳಿಕವೂ ಗ್ರಾಹಕರಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಡಿ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್, ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಪ್ರತಿಕ್ರಿಯೆ ಏನು?:''ಸರ್ಕಾರದಿಂದ ನಿಗದಿಯಾದ ಅವಧಿ ಉಲ್ಲಂಘಿಸಿ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒನ್ 8 ಕಮ್ಯೂನ್ ಮಾತ್ರವಲ್ಲದೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಕೇಂದ್ರ ವಿಭಾಗದ ಇನ್ನೂ ಕೆಲ ರೆಸ್ಟೋರೆಂಟ್ ಹಾಗೂ ಪಬ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಈಟಿವಿ ಭಾರತಕ್ಕೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ ಹೊರತಾಗಿ ವಿರಾಟ್ ಕೊಹ್ಲಿಯವರ ಮಹತ್ವಾಕಾಂಕ್ಷೆಯ ಉದ್ಯಮವಾಗಿರುವ ಒನ್ 8 ಕಮ್ಯೂನ್ ದೆಹಲಿ, ಮುಂಬೈ, ಪುಣೆ ಹಾಗೂ ಕೊಲ್ಕತ್ತಾದಲ್ಲಿಯೂ ಇದೆ. 2023ರ ಡಿಸೆಂಬರ್‌ನಿಂದ ಬೆಂಗಳೂರಿನಲ್ಲಿಯೂ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಆರಂಭವಾಗಿದೆ. ವಿಶೇಷವೆಂದರೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೂಗಳತೆಯ ದೂರದಲ್ಲಿರುವ ಕಸ್ತೂರಬಾ ರಸ್ತೆಯ ರತ್ನಂಸ್ ಕಾಂಪ್ಲೆಕ್ಸ್ನ ಆರನೇ ಮಹಡಿಯಲ್ಲಿರುವ ಒನ್ 8 ಕಮ್ಯೂನ್‌ನಲ್ಲಿ ಕುಳಿತು ಕಬ್ಬನ್ ಪಾರ್ಕ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಭಾಗಶಃ ದೃಶ್ಯಗಳನ್ನ ಗ್ರಾಹಕರು ಸವಿಯಬಹುದು.
ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ಎರಡು ಬಾರಿ ₹2.32 ಕೋಟಿ ಸಾಲ: ಐವರ ವಿರುದ್ಧ ಎಫ್ಐಆರ್ - Fake Document Case