ಬೆಂಗಳೂರು:ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ವಂಚಿಸುತ್ತಿದ್ದ ಐಶ್ವರ್ಯ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಹಣ ಮತ್ತು ಚಿನ್ನಾಭರಣಗಳು ಸೇರಿದಂತೆ 5.03 ಕೋಟಿ ರೂ ವಂಚಿಸಿರುವುದಾಗಿ ಡಾ.ಮಂಜುಳಾ ಪಾಟೀಲ್ ಎಂಬವರು ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದು, ಐಶ್ವರ್ಯಾ ಗೌಡ, ಅವರ ಪತಿ ಹರೀಶ್ ಕೆ.ಎನ್, ಕಾರು ಚಾಲಕ ಧನಂಜಯ್ ಹಾಗೂ ಅಶ್ವಥ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಮಂಜುಳಾ ಪಾಟೀಲ್ ಅವರಿಗೆ 2020-21ನೇ ಸಾಲಿನಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾಗ ಐಶ್ವರ್ಯಾ ಗೌಡ ಪರಿಚಯವಾಗಿತ್ತು. ತಾನು, ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಹೋದರಿ ಎಂದು ಪರಿಚಯಿಸಿಕೊಂಡಿದ್ದ ಐಶ್ವರ್ಯಾ ಗೌಡ, ತನಗೆ ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್, ಕೆಸಿನೋ ವ್ಯವಹಾರ ಇರುವುದಾಗಿ ನಂಬಿಸಿದ್ದಳು.
2022ರಿಂದ 2024ರವೆಗೂ ಹೂಡಿಕೆ, ಮತ್ತಿತರ ಕಾರಣಗಳನ್ನು ನೀಡಿ ಹಂತಹಂತವಾಗಿ 2.52 ಕೋಟಿ ರೂ ಹಣ ಹಾಗೂ 2.50 ಕೋಟಿ ಮೌಲ್ಯದ ಒಟ್ಟು 2 ಕೆ.ಜಿ 350 ಗ್ರಾಂ ಚಿನ್ನಾಭರಣ ಪಡೆದಿದ್ದ ಐಶ್ವರ್ಯಾ ಗೌಡ ಹಿಂದಿರುಗಿಸದೇ ಸಬೂಬು ಹೇಳುತ್ತಿದ್ದಳು. ಈ ನಡುವೆ ಇತ್ತೀಚಿಗೆ ಐಶ್ವರ್ಯಾ ಗೌಡ ಮತ್ತಿತರ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಹಾಗೂ ಆರೋಪಿಗಳು ಜಾಮೀನು ಪಡೆದಿರುವುದು ಮಂಜುಳಾ ಪಾಟೀಲ್ ಅವರ ಗಮನಕ್ಕೆ ಬಂದಿತ್ತು.
ಜನವರಿ 1ರಂದು ಮಂಜುಳಾ ಪಾಟೀಲ್ ಅವರ ಮನೆ ಬಳಿ ತೆರಳಿದ್ದ ಚಾಲಕ ಧನಂಜಯ್, ಐಶ್ವರ್ಯಾ ಗೌಡಗೆ ಕರೆ ಮಾಡಿ ಕೊಟ್ಟಿದ್ದ. ಫೋನ್‌ನಲ್ಲಿ ಮಾತನಾಡಿದ್ದ ಐಶ್ವರ್ಯಾ ಗೌಡ, ''ನಿನಗೆ ಕೊಡಬೇಕಿರುವ ಹಣ, ಚಿನ್ನಾಭರಣದ ಕುರಿತು ಯಾರಿಗೂ ಹೇಳಬಾರದು, ದೂರು ನೀಡಬಾರದು. ಹಾಗೇನಾದರೂ ದೂರು ನೀಡಿದರೆ, ಸಾಕ್ಷಿ ಹೇಳಿಕೆ ನೀಡಿದರೆ ಕೊಡಬೇಕಿರುವ ಹಣ ಚಿನ್ನಾಭರಣ ಕೊಡುವುದಿಲ್ಲ. ನಾನು ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಹೋದರಿ ಎಂಬುದು ಗೊತ್ತಿದೆ ತಾನೆ?" ಎಂದು ಬೆದರಿಕೆ ಹಾಕಿರುವುದಾಗಿ ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ವಂಚನೆ ಪ್ರಕರಣದಲ್ಲಿ ಐಶ್ವರ್ಯಗೌಡ ದಂಪತಿಗೆ ಜಾಮೀನು ಮಂಜೂರು