ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಹಾಗೂ ತಮ್ಮ ಸಹೋದರ ಡಿ.ಕೆ.ಸುರೇಶ್ ಪರ ಮತ ಯಾಚಿಸಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಇತ್ತೀಚಿಗೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯಶವಂತಪುರದ ಆರ್‌ಎಸ್‌ಎಸ್ ಶಾಂತಿ ನಿವಾಸ ಅಪಾರ್ಟ್‌ಮೆಂಟ್, ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ಸೇರಿ ವಿವಿಧೆಡೆ ಸಹೋದರ ಡಿ.ಕೆ ಸುರೇಶ್ ಪರ ಡಿ.ಕೆ.ಶಿವಕುಮಾರ್ ಮತಯಾಚಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು 'ನಮ್ಮ ಮೇಲೆ ವಿಶ್ವಾಸವಿರಿಸಿದರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ದಿಲ್ಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಮತಗಳನ್ನು ಡಿ.ಕೆ.ಸುರೇಶ್ ಅವರಿಗೆ ಹಾಕಬೇಕು. ನಮ್ಮ ಗ್ಯಾರಂಟಿ ನಾವು ಮಾಡಿದ್ದೇವೆ, ನಿಮ್ಮ ಗ್ಯಾರಂಟಿ ನೀವು ಮಾಡಿ' ಎಂದಿದ್ದರು ಅನ್ನುವ ಆರೋಪ ಕೇಳಿಬಂದಿತ್ತು. ಉಪಮುಖ್ಯಮಂತ್ರಿಯವರು ಮತದಾರರಿಗೆ ಆಮಿಷವೊಡ್ಡಿ ಹಾಗೂ ಅನಾನುಕೂಲದ ಒತ್ತಡ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.