ಬೆಂಗಳೂರು:ರಾಜ್ಯದಲ್ಲಿ ಅತಿವೇಗದ ವಾಹನ ಚಾಲನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಯಾಗಿರುವ ನೂತನ ನಿಯಮದ ಅನುಸಾರ ಮೊದಲ ದಿನ 33 ಎಫ್ಐಆರ್‌ಗಳು ದಾಖಲಾಗಿವೆ. ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಗಂಟೆಗೆ 130 ಕಿ.ಮೀ ಗಿಂತಲೂ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ನಿಯಮ ಅನುಷ್ಠಾನಗೊಳಿಸಲಾಗಿತ್ತು.
ಈ ಕುರಿತು 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ''ವೇಗಮಿತಿ ಉಲ್ಲಂಘಿಸಿದ 33 ವಾಹನಗಳ ಚಾಲಕರ ವಿರುದ್ಧ ಮೊದಲ ದಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಬೆಂಗಳೂರು-ಮೈಸೂರು ರಸ್ತೆ ಮಾರ್ಗದಲ್ಲಿನ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎಎನ್‌ಪಿಆರ್ (Automatic Number Plate Recognition) ಕ್ಯಾಮರಾಗಳಿಲ್ಲ. ಆದರೂ ಸಹ ಸ್ಪೀಡ್ ಗನ್ ಮೂಲಕ ಪೊಲೀಸ್ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿದ್ದಾರೆ, ಹೆಚ್ಚು ಪ್ರಕರಣಗಳು ದಾಖಲಾಗಿಲ್ಲ'' ಎಂದು ಮಾಹಿತಿ ನೀಡಿದರು.