ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮ ಅಕ್ರಮದಿಂದ ಎಚ್ಚೆತ್ತ ಸರ್ಕಾರ: ನಿಗಮ-ಮಂಡಳಿಗಳಿಗೆ ಹಣಕಾಸು ನಿರ್ವಹಣೆಯ ಗೈಡ್​ಲೈನ್ಸ್ - Guidelines For Corporation Boards

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಿಂದ ಎಚ್ಚೆತ್ತ ರಾಜ್ಯ ಸರ್ಕಾರ, ನಿಗಮ ಮಂಡಳಿಗಳಿಗೆ ಹಣಕಾಸು ನಿರ್ವಹಣೆಯ ಮಾರ್ಗಸೂಚಿ ಹೊರಡಿಸಿದೆ.

Financial Management Guidelines  Government wakes up  Bengaluru  Valmiki Development Corporation
ವಿಧಾನಸೌಧ (ETV Bharat)

By ETV Bharat Karnataka Team

Published : Jun 30, 2024, 1:12 PM IST

ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಎಲ್ಲಾ ನಿಗಮ, ಸಾರ್ವಜನಿಕ ಸಂಸ್ಥೆ, ಮಂಡಳಿ, ವಿವಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಮರ್ಪಕವಾಗಿ, ಎಚ್ಚರಿಕೆಯಿಂದ ಹಣಕಾಸು ನಿರ್ವಹಣೆ ಮಾಡುವಂತೆ ಸಲಹೆ ಸೂಚನೆ ನೀಡಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ನಿಗಮಗಳು, ಸಾರ್ವಜನಿಕ ಸಂಸ್ಥೆ, ಮಂಡಳಿ, ವಿವಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ಯಾಂಕ್ ಠೇವಣಿ, ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ನಿರ್ದೇಶ ಒಳಗೊಂಡ ಸುತ್ತೋಲೆ ಹೊರಡಿಸಿದೆ.

ಎಂಡಿ, ಸಿಇಒ ನಿರ್ವಹಿಸಬೇಕಾದ ಜವಾಬ್ದಾರಿ: ಮಾಸಿಕವಾಗಿ ಸಂಸ್ಥೆಗಳ ಎಲ್ಲಾ ಖಾತೆಗಳಲ್ಲಿನ ಬ್ಯಾಂಕ್ ಬ್ಯಾಲೆನ್ಸ್, ಆರಂಭಿಕ ಬ್ಯಾಲೆನ್ಸ್, ಕ್ಲೋಸಿಂಗ್ ಬ್ಯಾಲೆನ್ಸ್​ಗಳನ್ನು ಪರಿಶೀಲಿಸಬೇಕು. ಪಾವತಿ ಮಾಡಲಾದ ಮೊತ್ತದ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ನಿಗಮ, ಮಂಡಳಿ, ಸಂಸ್ಥೆಗಳ ಎಲ್ಲಾ ಟರ್ಮ್ ಡಿಪಾಸಿಟ್ ಖಾತೆಯಲ್ಲಿನ ಪ್ರಧಾನ ಮೊತ್ತ, ಮೆಚ್ಯೂರಿಟಿ ಅವಧಿ, ಬಡ್ಡಿ ದರ, ಪಾವತಿಯಾದ ಬಡ್ಡಿಯ ವಿವರಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಆಂತರಿಕ ಆಡಿಟರ್​ನಿಂದ ಮಾಸಿಕವಾಗಿ ಭೌತಿಕ ದೃಢೀಕರಣ ಮಾಡಲು ಸೂಚಿಸಲಾಗಿದೆ. ಅದರಂತೆ ಆಡಿಟರ್​ಗಳು ಖುದ್ದು ಬ್ಯಾಂಕ್​ಗಳಿಗೆ ಭೇಟಿ ನೀಡಿ, ನಿಗಮ, ಮಂಡಳಿ, ಸಂಸ್ಥೆಗಳು ಹೊಂದಿರುವ ಎಲ್ಲಾ ಠೇವಣಿ, ಬ್ಯಾಂಕ್ ಖಾತೆಗಳಲ್ಲಿನ ಬ್ಯಾಲೆನ್ಸ್ ಅನ್ನು ನಿಗಮ, ಮಂಡಳಿ, ಸಂಸ್ಥೆಗಳು ನಿರ್ವಹಿಸುತ್ತಿರುವ ಲೆಕ್ಕಪತ್ರಗಳಲ್ಲಿನ ಬ್ಯಾಲೆನ್ಸ್‌ಗಳನ್ನು ಹೋಲಿಕೆ ಮಾಡಿ ಪರಿಶೀಲಿಸಬೇಕು.

ಈ ಬಗ್ಗೆ ಆಡಿಟರ್​ಗಳಿಗೆ ನಿಗಮ, ಮಂಡಳಿ, ಸಂಸ್ಥೆಗಳ ಬದಲು ಬ್ಯಾಂಕ್​ಗಳಿಂದಲೇ ದೃಢೀಕರಣ ನೀಡುವುದನ್ನು ಖಚಿತಪಡಿಸಬೇಕು. ಮತ್ತು ಆಡಿಟರ್​ಗಳು ಬಗ್ಗೆ ವಿವರವಾದ ವರದಿ ನೀಡಬೇಕು. ಒಂದು ವೇಳೆ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಿಗಮಗಳು ನಿರ್ವಹಿಸಿರುವ ಲೆಕ್ಕಪತ್ರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಆ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಬೇಕು. ಮಂಡಳಿ ಸಭೆಯಲ್ಲಿ ಈ ನಿಟ್ಟಿನ ಆಡಿಟರ್ ವರದಿಯನ್ನು ಮಂಡಿಸುವಂತೆ ನಿರ್ದೇಶನ ನೀಡಿದ್ದಾರೆ.

ಎಲ್ಲಾ ಕಡತಗಳು, ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಬ್ಯಾಂಕಿನಿಂದ ದೃಢೀಕರಿಸಲ್ಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ದಾಖಲಿಸಿ, ಅವುಗಳನ್ನು ಲೆಕ್ಕಪರಿಶೋಧ ಹಾಗೂ ಪರಿಶೀಲನೆಗಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಟರ್ಮ್ ಡಿಪಾಸಿಟ್​​ಗೆ ಮಾರ್ಗಸೂಚಿಗಳು:

  • ಬ್ಯಾಂಕ್ ಠೇವಣಿಗಳಲ್ಲಿ ಇಡುವ ಮೊತ್ತವನ್ನು ನಿಗಮ, ಮಂಡಳಿಗಳು ಕಡ್ಡಾಯವಾಗಿ ಇಂಟರ್ನೆಟ್ ಬ್ಯಾಂಕ್, ಆರ್​ಟಿಜಿಎಸ್ ಮೂಲಕ ನಿಗಮ, ಮಂಡಳಿ, ಸಂಸ್ಥೆಗಳ ಹೆಸರಲ್ಲಿ ಮಾಡಲಾದ ಖಾತಡಗಳಿಗೆ ವರ್ಗಾವಣೆ ಮಾಡಬೇಕು.
  • ನಿಗಮ, ಮಂಡಳಿಗಳ ನೋಂದಾಯಿತ ಕಚೇರಿ ಇರುವ ಅದೇ ನಗರದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಮಾಡಬೇಕು.
  • ಪ್ರತಿ ಠೇವಣಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಬ್ಯಾಂಕ್​ಗಳಿಂದ ಪಡೆಯಬೇಕು.
  • ನಿಗಮಗಳು ಠೇವಣಿ ಅವಧಿ ಮುಗಿದ ಬಳಿಕ ಬಡ್ಡಿ ಸಹಿತದ ಠೇವಣಿ ಮೊತ್ತ ಯಾವ ಸಂಸ್ಥೆಗೆ ವರ್ಗಾವಣೆ ಆಗುತ್ತೋ ಅದರ ಖಾತೆ ಸಂಖ್ಯೆಯನ್ನು ಪಡೆದಿರಬೇಕು. ಠೇವಣಿ ಅವಧಿ ಮುಗಿಯುವವರೆಗೆ ಆ ಕಡತವನ್ನು ನಿರ್ವಹಿಸಬೇಕು.
  • ಯಾವ ಸಂಸ್ಥೆಗೆ ಬಡ್ಡಿ ಮೊತ್ತವನ್ನು ಕಟ್ಟಲಾಗುತ್ತದೆಯೋ ಅದರ ಖಾತೆಯನ್ನು ಪರಿಶೀಲಿಸಬೇಕು. ಬಡ್ಡಿ ಮೊತ್ತವನ್ನು ಸಕಾಲದಲ್ಲಿ ಕಟ್ಟಲಾಗುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
  • ಠೇವಣಿ ಮೇಲಿನ ಬಡ್ಡಿ ಮೊತ್ತಕ್ಕೆ ಟಿಡಿಎಸ್ ಅನ್ನು ಸಕಾಲದಲ್ಲಿ ಕಟ್ಟಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.
  • ಜಂಟಿ ಖಾತೆಯಲ್ಲಿ ಎಲ್ಲಾ ನಿಗಮ ಮಂಡಳಿಗಳು ಠೇವಣಿ ಮೊತ್ತವನ್ನು ಇಡಬೇಕು.

ಮಂಡಳಿ ಸಭೆಯಲ್ಲಿ ವರದಿ ಮಂಡನೆ:ನಿಗಮ ಮಂಡಳಿಗಳು ಪ್ರತಿ ಬೋರ್ಡ್ ಮೀಟಿಂಗ್​ನಲ್ಲಿ ಪ್ರತಿ ಠೇವಣಿ ಖಾತೆಗಳ ಮಾಹಿತಿಯ ವರದಿಯನ್ನು ನೀಡಬೇಕು. ಆ ವರದಿಯನ್ನು ಹಿಂದಿನ ಮಂಡಳಿ ಸಭೆಯಲ್ಲಿ ಸಲ್ಲಿಸಲಾದ ವರದಿಗೆ ತುಲನೆ ಮಾಡಬೇಕು. ಈ ವರದಿಯಲ್ಲಿ ಪರಿಶೀಲನಾ ಪ್ರಕ್ರಿಯೆಯ ಮಾಹಿತಿಯೂ ಒಳಗೊಂಡಿರಬೇಕು. ಪರಿಶೀಲನೆ ವೇಳೆ ಯಾವುದಾದರೂ ಲೋಪಗಳು, ವ್ಯತ್ಯಾಸಗಳು ಕಂಡು ಬಂದಿದೆಯೇ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು.

ಕಾರ್ಯದರ್ಶಿಗಳ ಜವಾಬ್ದಾರಿ ಏನು?:

  • ಎಲ್ಲಾ ನಿಗಮ ಮಂಡಳಿಗಳು, ಸಾರ್ವಜನಿಕ ಸಂಸ್ಥೆಗಳು ವಿಶ್ವವಿದ್ಯಾಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ನಿರ್ದೇಶನಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಸಂಬಂಧಿತ ಇಲಾಖೆಯ ಕಾರ್ಯದರ್ಶಿಗಳು ಖಾತ್ರಿಪಡಿಸಿಕೊಳ್ಳಬೇಕು.
  • ಸಂಬಂಧಿತ ಇಲಾಖೆ ಕಾರ್ಯದರ್ಶಿಗಳು ನಿಗಮ ಮಂಡಳಿಗಳು, ಸಾರ್ವಜನಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಎಲ್ಲಾ ನಿರ್ದೇಶನಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಲ ಕಾಲಕ್ಕೆ ತನಿಖಾ ತಂಡವನ್ನು ಕಳುಹಿಸಿ, ಪರಿಶೀಲಿಸಬೇಕು.
  • ಈ ನಿರ್ದೇಶನಗಳನ್ನು ಪಾಲಿಸದೇ ಹೋದಲ್ಲಿ ನಿಗಮ ಮಂಡಳಿಗಳು ಸಾರ್ವಜನಿಕ ಸಂಸ್ಥೆಗಳ ಎಂಡಿ/ ಮತ್ತು ಸಿಇಒಗಳು ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.

ಇದನ್ನೂ ಓದಿ:ಬೆಂಗಳೂರು ನಗರ ವಿವಿ 3ನೇ ಘಟಿಕೋತ್ಸವ: ಮಾಜಿ ಕ್ರಿಕೆಟರ್​ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್ ಪ್ರದಾನ - Convocation Ceremony

ABOUT THE AUTHOR

...view details