ಬೆಳಗಾವಿ:ಕೊನೆಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭೆ ಟಿಕೆಟ್ ಘೋಷಣೆಯಾಗಿದೆ. ಈ ಮೂಲಕ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊರ ಜಿಲ್ಲೆಯವರೊಬ್ಬರು ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದಾರೆ.
ಹೌದು, ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡದಂತೆ ಜಿಲ್ಲೆಯ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ನಡೆದಿತ್ತು. ಅಲ್ಲದೇ ಬೆಂಗಳೂರಿಗೂ ಒಂದು ನಿಯೋಗ ಹೋಗಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಜಿಲ್ಲೆಯ ನಾಯಕರ ಮನವಿಗೆ ಸೊಪ್ಪು ಹಾಕದೇ ಇಂದು ಪ್ರಕಟವಾದ ಎರಡನೇ ಪಟ್ಟಿಯಲ್ಲಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದೆ.
2004ರಿಂದ ಈ ವರೆಗೆ ದಿ.ಸುರೇಶ ಅಂಗಡಿ ಮತ್ತು ಅವರ ಪತ್ನಿ ಮಂಗಲಾ ಅಂಗಡಿ ಸತತವಾಗಿ ಗೆಲ್ಲುವ ಮೂಲಕ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರು. ಈಗ ಬದಲಾದ ರಾಜಕೀಯದಲ್ಲಿ ಅಂಗಡಿ ಕುಟುಂಬದ ಬೀಗರಾಗಿರುವ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಟಿಕೆಟ್ ರೇಸ್ನಲ್ಲಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹಿರಿಯ ಮುಖಂಡ ಶಂಕರಗೌಡ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜೀರಲಿ ಸೇರಿ ಮತ್ತಿತರರಿಗೆ ತೀವ್ರ ನಿರಾಸೆಯಾಗಿದೆ. ಜಿಲ್ಲೆಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿಯೇ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಅಂತಿಮಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ, ಹಿರಿಯ-ಅನುಭವಿ ರಾಜಕಾರಣಿಯಾಗಿರುವ ಜಗದೀಶ ಶೆಟ್ಟರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಯುವಕ ಮೃಣಾಲ್ ಕಣಕ್ಕಿಳಿದಿದ್ದು, ಸೀನಿಯರ್ ವರ್ಸಸ್ ಜೂನಿಯರ್ ಕದನಕ್ಕೆ ಬೆಳಗಾವಿ ಸಾಕ್ಷಿಯಾಗಲಿದೆ. ಅಂತಿಮವಾಗಿ ಮತದಾರ ಪ್ರಭುಗಳು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ:ಬೆಳಗಾವಿ ಲೋಕಸಭೆಗೆ ಜಗದೀಶ್ ಶೆಟ್ಟರ್ ಹೆಸರು ಘೋಷಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಾಲಿ ಸಂಸದೆ ಮಂಗಲಾ ಅಂಗಡಿ, ಇಂದು ಸಂಜೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಫೋನ್ ಮಾಡಿದ್ದರು. ಶೆಟ್ಟರ್ ಅವರನ್ನು ಹೆಚ್ಚಿನ ಮತಗಳಿಂದ ಆರಿಸಿ ತರಬೇಕೆಂದು ಹೇಳಿದ್ದಾರೆ.
ನಡ್ಡಾ ಮನೆಗೆ ಬಂದಾಗ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಅಂತಾ ಹೇಳಿದ್ದೆ, ಈಗ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ. ಈವರೆಗೆ ಅಂಗಡಿ ಕುಟುಂಬಕ್ಕೆ ಕಾರ್ಯಕರ್ತರು ಬಹಳ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರ ಪ್ರೀತಿ ಇರೋದಕ್ಕೆ ನಾನು ಆರಿಸಿ ಬಂದಿದ್ದೇನೆ. ನನಗೆ ಬೆಂಬಲಿಸಿದ ಹಾಗೆ ಶೆಟ್ಟರ್ ಅವರಿಗೂ ಬೆಂಬಲಿಸಿ. ಯಾರಿಗೆ ಟಿಕೆಟ್ ಕೊಟ್ಟರು ಮೋದಿ ಪ್ರಧಾನಿಗಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಶೆಟ್ಟರ್ ಹೊರಗಿನವರ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಂಗಳಾ ಅಂಗಡಿ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಕಾರ್ಯಕರ್ತರು ಪಾಲಿಸುತ್ತಾರೆ. ನಮಗೂ ಕಾರ್ಯಕರ್ತರು ಫೋನ್ ಮಾಡಿ ಸಪೋರ್ಟ್ ಮಾಡ್ತಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಇವಾಗ ಏನು ಕೇಳಿಲ್ಲ, ಮುಂದೆ ನೋಡೋಣ ಎಂದು ಹೇಳಿದರು.
ಇದನ್ನೂಓದಿ:ಲೋಕಸಭೆ ಚುನಾವಣೆ: ಬಿಜೆಪಿ ಐದನೇ ಪಟ್ಟಿ ಬಿಡುಗಡೆ; ಶೆಟ್ಟರ್, ಕಾಗೇರಿ, ಸುಧಾಕರ್ ಸೇರಿ ನಾಲ್ವರಿಗೆ ಟಿಕೆಟ್ - BJP FIFTH LIST