ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಕಾಂಗ್ರೆಸ್ನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ ಮುಂದೆ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಬೇಕು, ರಾಜ್ಯದ ಹಿತ ಮುಖ್ಯಾನಾ.? ಡಿಎಂಕೆ ಮೈತ್ರಿ ಮುಖ್ಯಾನಾ ಅನ್ನೋದನ್ನ ಸಾಬೀತುಪಡಿಸಬೇಕು ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿರೋ ದುರ್ಬಲ ಸರ್ಕಾರವನ್ನು ಬಳಸಿಕೊಂಡು ಐಎನ್ಡಿಐಎ ಪಾಲುದಾರ ಡಿಎಂಕೆ ಪ್ರಣಾಳಿಕೆಯಲ್ಲಿ ಕರ್ನಾಟಕದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡಲ್ಲ ಅಂತ ಪ್ರಕಟಿಸಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಮ್ಮನೀರು, ನಮ್ಮಹಕ್ಕು ಅಂತ ಪಾದಯಾತ್ರೆ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಬಾರದು, ಆದರೂ ಮಾಡಿದ್ದರು.
ಈಗ ಅವರದ್ದೇ ಪಾರ್ಟನರ್, ಕ್ಲೋಸ್ ಫ್ರೆಂಡ್ ಸ್ಟಾಲಿನ್. ನಗುಮುಖದ ಸ್ಟಾಲಿನ್ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎನ್ನುವುದನ್ನು ಪ್ರಣಾಳಿಕೆಯಲ್ಲಿಯೇ ಹೇಳಿದ್ದಾರೆ, ಮೇಕೇದಾಟು ಪ್ರಾರಂಭ ಆದಾಗ ಡಿಕೆ ಶಿವಕುಮಾರ್ ಮೈ ತುಂಬಾ ಸ್ನಾನ ಮಾಡಿದ್ದರು. ಈಗ ಕುಡಿಯೋಕೂ ನೀರಿಲ್ಲ. ನಾನು ಕಂಡಂತೆ ಇದೇ ಮೊದಲು ಇಷ್ಟು ಸಮಸ್ಯೆ ಬಂದಿದೆ. ಶಾಡೋ ಸಿಎಂ ಒಳ್ಳೆಯ ಸಲಹೆ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಅದರಂತೆ ನಮ್ಮಹಣ, ನಮ್ಮತೆರಿಗೆ ಅಂತ ದೆಹಲಿಗೆ ಹೋದ ರೀತಿ ಈಗ ತಮಿಳುನಾಡಿಗೆ 135 ಶಾಸಕರನ್ನ ಕರೆದುಕೊಂಡು ಹೋಗಿ ಅಲ್ಲೇ ಪ್ರತಿಭಟನೆ ಮಾಡಿ ಎನ್ನುವ ಸಲಹೆ ನೀಡಿದರು. ರಾಜ್ಯದ ಹಿತ ಮುಖ್ಯಾನಾ.? ಡಿಎಂಕೆ ಮೈತ್ರಿ ಮುಖ್ಯಾನಾ ಅನ್ನೋದನ್ನ ಸಾಬೀತುಪಡಿಸಿ. ಮೈತ್ರೀನಾ, ರಾಜ್ಯದ ಹಿತಾನಾ.? ಗೋವಾದಲ್ಲಿ ಸೋನಿಯಾ ಗಾಂಧಿ ಅವರು ಒಂದು ಹನಿ ನೀರನ್ನು ಕೊಡಲ್ಲ ಅಂತ ಹೇಳಿದ್ದರು ಈಗ ಮತ್ತೊಮ್ಮೆ ಡಿಎಂಕೆ ಮೂಲಕ ಹೇಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸ್ಪಷ್ಟನೆ ನೀಡಬೇಕು. ಪಾದಯಾತ್ರೆ ಬಗ್ಗೆ ಗಿಮಿಕ್ಸ್ ಅಂತ ತಿಳ್ಕೋತೀವಿ. ಪಾದಯಾತ್ರೆ ತಳ್ಳಾಟ, ನೂಕಾಟ, ಓಲಾಟದ ಬಗ್ಗೆ ಸ್ಪಷ್ಟಪಡಿಸಿ, ರಾಜ್ಯದ ಜನತೆ ನಿಮ್ಮನ್ನು ನಂಬಬೇಕಿದ್ದರೆ, ನುಡಿದಂತೆ ನಡೆಯುವವರು ಎಂದು ತೋರಿಸುವುದಾದರೆ ಮೈತ್ರಿ ಮುಖ್ಯವೇ ರಾಜ್ಯದ ಹಿತ ಮುಖ್ಯವೇ ಎಂದು ತೀರ್ಮಾನ ಮಾಡಿ ಎಂದು ಆಗ್ರಹಿಸಿದರು.
ಏನಿಲ್ಲ ಏನಿಲ್ಲ- ಬೆಂಗಳೂರಿನಲ್ಲಿ ನೀರಿಲ್ಲ:ಡಿಸಿಎಂಅವರು ಮೇಕೆದಾಟು ಪಾದಯಾತ್ರೆ ವೇಳೆ ಅಲ್ಲಿ ಸ್ನಾನ ಮಾಡಿದ್ದರು ಎಂದು ಫೋಟೊ ಪ್ರದರ್ಶಿಸಿದ ಅವರು, ಈಗ ಬೆಂಗಳೂರಿನಲ್ಲಿ ಸ್ನಾನಕ್ಕಲ್ಲ; ಮುಖ ತೊಳೆದುಕೊಳ್ಳಲೂ ನೀರಿಲ್ಲ. ನೀರಿನ ಕೊರತೆ ಪರಿಣಾಮವಾಗಿ ಬೆಂಗಳೂರಿನ ಜನರು ಗುಳೆ ಹೋಗುತ್ತಿದ್ದಾರೆ. ನಾನು ಬೆಂಗಳೂರಿನ ಒಬ್ಬ ನಿವಾಸಿ. ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ. ಯಾವತ್ತೂ ಈ ರೀತಿ ಆಗಿಲ್ಲ. ಏನಿಲ್ಲ ಏನಿಲ್ಲ- ನೀರಿಲ್ಲ ನೀರಿಲ್ಲ ಎಂಬ ಸ್ಥಿತಿ ಬೆಂಗಳೂರಿನದು ಎಂದು ಬೇಸರ ವ್ಯಕ್ತಪಡಿಸಿದರು.