ಕರ್ನಾಟಕ

karnataka

ETV Bharat / state

ಬೆಂಗಳೂರು: ಶಾಲೆಗೆ ಹೋಗದೇ ಮೊಬೈಲ್ ನೋಡುತ್ತಿದ್ದ ಮಗ, ಪುತ್ರನ ಹತ್ಯೆ ಮಾಡಿದ ತಂದೆಯ ಬಂಧನ - FATHER KILLED HIS SON

ಸದಾ ಮೊಬೈಲ್​ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧಿತ ಆರೋಪ
ಬಂಧಿತ ಆರೋಪ (ETV Bharat)

By ETV Bharat Karnataka Team

Published : Nov 16, 2024, 9:15 PM IST

ಬೆಂಗಳೂರು:ಶಾಲೆಗೂ ಹೋಗದೇ ಸದಾ ಮೊಬೈಲ್​ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ಕೊಲೆ ಮಾಡಿದ ಆರೋಪದಡಿ ತಂದೆಯನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಬಂಧಿತ ಆರೋಪಿ. ತೇಜಸ್ ಮೃತಪಟ್ಟ ಬಾಲಕ.

ಯಲಚೇನಹಳ್ಳಿ ವಾರ್ಡ್ ಕಾಶಿನಗರದ ಎರಡನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಆರೋಪಿಯು ಪತ್ನಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದ. ವೃತ್ತಿಯಲ್ಲಿ ಕಾರ್ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ತೇಜಸ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್ ವಿಚಾರಕ್ಕೆ ನಿನ್ನೆ ಮಗನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಾಲೆಗೆ ಹೋಗದೇ ಮೊಬೈಲ್​ನಲ್ಲೇ ತಲ್ಲೀನನಾಗಿರುತ್ತಿದ್ದ ತೇಜಸ್​ನ ಮೊಬೈಲ್ ಇತ್ತೀಚೆಗೆ ಕೆಟ್ಟು ಹೋಗಿತ್ತು‌.‌‌ ಹೀಗಾಗಿ ಮೊಬೈಲ್ ರಿಪೇರಿ ಮಾಡಿಸುವಂತೆ ತಂದೆಯನ್ನು ಪೀಡಿಸುತ್ತಿದ್ದ‌‌. ನಿನ್ನೆ ಬೆಳಗ್ಗೆ ಮೊಬೈಲ್ ವಿಚಾರಕ್ಕಾಗಿ ಜಗಳವಾಗಿದೆ. ಅಲ್ಲದೇ ಶಾಲೆಗೆ ಹೋಗದೆ ಕೆಟ್ಟವರ ಜೊತೆ ಸೇರಿ ಹಾಳಾಗಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ ರವಿಕುಮಾರ್ ಮಗನ ಮೇಲೆ ಹಲ್ಲೆ ಮಾಡಿ, ಗೋಡೆಗೆ ತಲೆಯನ್ನ ಗುದ್ದಿಸಿದ್ದಾನೆ.

ಡಿಸಿಪಿ ಲೋಕೇಶ್ ಜಗಲಾಸರ್ (ETV Bharat)

ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ತೇಜಸ್​ ಕುಸಿದುಬಿದ್ದಿದ್ದಾನೆ. ಮಗ ನಾಟಕವಾಡುತ್ತಿರುವುದಾಗಿ ಭಾವಿಸಿ ಮನೆಯಿಂದ ಹೊರಗೆ ತೆರಳಿದ್ದ. ಮಧ್ಯಾಹ್ನ ಮನೆಗೆ ಬಂದಾಗ ಮಗ ಬಿದ್ದಿರುವುದನ್ನ ಕಂಡು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆ ಪ್ರಕರಣದ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯಿಸಿ, "ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ತಂದೆ ಮಗನ ಮೇಳೆ ಹಲ್ಲೆ‌ ಮಾಡಿದ್ದ. 8 ರಿಂದ ಮಧ್ಯಾಹ್ನ 3 ಗಂಟೆವರೆಗೂ ಮಗ ನೋವಿನಿಂದ ಒದ್ದಾಡಿದ್ದಾನೆ. ನಂತರ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಹೋಗುವ ಮುನ್ನವೇ ಬಾಲಕ ಸಾವನ್ನಪ್ಪಿದ್ದಾನೆ" ಎಂದರು.

"ಶಾಲೆಗೆ ಹೋಗುತ್ತಿರಲ್ಲ ಮತ್ತು ಸದಾ ಫೋನ್ ಹಿಡಿದುಕೊಂಡಿರುತ್ತಿದ್ದ. ಅಲ್ಲದೇ ಫೋನ್ ಹಾಳಾಗಿದೆ ರಿಪೇರಿ ಮಾಡಿಸಿಕೊಡಿ ಅಂತಾ ತಂದೆಯನ್ನು ಪೀಡಿಸುತ್ತಿದ್ದ. ಈ ವೇಳೆ ಗಲಾಟೆಯಾಗಿ ತಂದೆ ಹಲ್ಲೆ ಮಾಡಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನ ವಶಕ್ಕೆ ಪಡೆದಾಗ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಯಾರಿಗೂ ಮಾಹಿತಿ ನೀಡದೇ ಮಗನ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದರು. ಯಾಕೆ ಮಾಹಿತಿ ನೀಡಿಲ್ಲ ಎಂಬುದರ ಬಗ್ಗೆಯೂ ತನಿಖೆ‌ ನಡೆಸಲಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಿಗೆ ಟ್ರಾಲಿ ಬ್ಯಾಗ್​ಗಳಲ್ಲಿ ಕಳ್ಳಸಾಗಣೆ ಯತ್ನ: ಏರ್​ಪೋರ್ಟ್​ನಲ್ಲಿ 40 ವನ್ಯಜೀವಿಗಳ ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು

ABOUT THE AUTHOR

...view details