ಹಾಸನ:ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ, ಮಗ ಸಾವನ್ನಪ್ಪಿ, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ರಾಕೇಶ್ (30) ಹಾಗೂ ಮೋಕ್ಷಿತ್ (08) ಮೃತಪಟ್ಟವರು. ರಾಕೇಶ್ ಪತ್ನಿ ಆಶಾ ಅವರಿಗೆ (25) ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಜೋಡಿಗಟ್ಟೆ ಹಿರೇಹಳ್ಳಿಯವರಾದ ಇವರು, ಶ್ರವಣಬೆಳಗೊಳ ಸಮೀಪದ ಶ್ರವಣೇರಿ ಗ್ರಾಮಕ್ಕೆ ತೆರೆಳುತ್ತಿದ್ದರು. ಕಾರಿನ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ತಂದೆ ಮತ್ತು ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರ ಸ್ಥಿತಿಯಲ್ಲಿರುವ ಆಶಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.