ಕರ್ನಾಟಕ

karnataka

ETV Bharat / state

ರೈತರ ದರ್ಖಾಸ್ತು ಪೋಡಿ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರದಿಂದ ದೃಢ ಹೆಜ್ಜೆ: ಸಚಿವ ಕೃಷ್ಣ ಬೈರೇಗೌಡ - Good News For Farmers

ರಾಜ್ಯಾದ್ಯಂತ ಪೋಡಿ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೇ ಮಾದರಿಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ (ETV Bharat)

By ETV Bharat Karnataka Team

Published : Sep 28, 2024, 2:06 PM IST

ಬೆಂಗಳೂರು : “ಸಂಪೂರ್ಣ ಹಾಗೂ ಕನಿಷ್ಠ ದಾಖಲೆ ಹೊಂದಿರುವ ರೈತರಿಗೆ ಮುಂದಿನ ಎರಡು-ಮೂರು ವರ್ಷದಲ್ಲಿ ಖಚಿತವಾಗಿ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ರೈತರ ಈ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕಂದಾಯ ಇಲಾಖೆ ದೃಢವಾದ ಹೆಜ್ಜೆ ಇಟ್ಟಿದೆ“ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.

ವಿಕಾಸಸೌಧದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತಮಾಡಿದ ಅವರು, “ವಾಸ್ತವದಲ್ಲಿ ರಾಜ್ಯಾದ್ಯಂತ ಎಷ್ಟು ಜನ ರೈತರ ಪೋಡಿ ಕೆಲಸ ಬಾಕಿ ಇದೆ ಎಂಬ ಮಾಹಿತಿಯಾಗಲಿ, ಅಂಕಿ-ಸಂಖ್ಯೆಯಾಗಲಿ ಸರ್ಕಾರದ ಬಳಿ ಇಲ್ಲ. ಹಾಗಾಗಿ ಈ ವಿಚಾರದಲ್ಲಿ ಪ್ರಗತಿ ಕೆಲಸವೊಂದೇ ಬಾಕಿ ಇದ್ದು, ಸೆಪ್ಟೆಂಬರ್ 2 ರಿಂದಲೇ ದರ್ಖಾಸ್ತು ಪೋಡಿ ಬಾಕಿ ಕೆಲಸ ಅಭಿಯಾನ ಮಾದರಿಯಲ್ಲಿ ಆರಂಭಿಸಲಾಗಿದೆ. ರೈತರ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.

ಸಚಿವ ಕೃಷ್ಣ ಬೈರೇಗೌಡ (ETV Bharat)

“ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಕನಿಷ್ಠ 4 ಲಕ್ಷ ರೈತರಿಗೆ ಸಂಬಂಧಿಸಿದ 69,437 ಸರ್ವೇ ನಂಬರ್ಗಳಲ್ಲಿ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅಂದರೆ ಸಂಬಂಧಪಟ್ಟ ರೈತರ ಕಡತಗಳನ್ನು ತಯಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ದಾಖಲೆಗಳನ್ನು ಒಂದುಗೂಡಿಸಿ ರೈತರು ಪೋಡಿಗೆ ಅರ್ಹರೇ ಎಂದು ಗುರುತಿಸಲಾಗುವುದು. ಶಿರಸ್ತೇದಾರ್ ಹಾಗೂ ತಹಶೀಲ್ದಾರ್ ಈ ಬಗ್ಗೆ ಪರಿಗಣಿಸಿ ನಂತರ ನಮೂನೆ 6-10ರ ಪ್ರಕ್ರಿಯೆಗೆ ಸರ್ವೇ ಇಲಾಖೆಗೆ ಪೋಡಿಗೆ ಶೀಫಾರಸು ಮಾಡುತ್ತಾರೆ. ನಂತರ ರೈತರಿಗೆ ಪೋಡಿ ಲಭ್ಯವಾಗುತ್ತದೆ” ಎಂದರು.

ರಾಜ್ಯಾದ್ಯಂತ ಪೋಡಿ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 8279 ಸರ್ಕಾರಿ ಸರ್ವೇ ನಂಬರ್​ಗಳಲ್ಲಿ 80,000 ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಪರಿಣಾಮ ದುರಸ್ತಿ ಕೆಲಸ ಸವಾಲಾಗಿದ್ದು, ಇದೀಗ ಅಕ್ಟೋಬರ್​ನಿಂದ ಭೂಮಿ ಸರ್ವೇ ಕೆಲಸಗಳನ್ನು ಆರಂಭಿಸಲಾಗುವುದು. ಅಕ್ಟೋಬರ್ ಅಂತ್ಯದೊಳಗೆ ಕೆಲವರಿಗೆ ಪೋಡಿ ಮಾಡಿಕೊಡಲಾಗುವುದು. ಹಾಸನದಲ್ಲಿ 35,000 ರೈತರ ಬಳಿ ಸಂಪೂರ್ಣ ದಾಖಲೆ ಇದೆ. ಹೀಗಾಗಿ ಈ ವರ್ಷದಲ್ಲಿ ಕನಿಷ್ಟ 30,000 ರೈತರಿಗೆ ಪೋಡಿ ಮಾಡಿಕೊಡಲಾಗುವುದು. ಇದೇ ಮಾದರಿಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು” ಎಂದು ಸಚಿವರು ಭರವಸೆ ನೀಡಿದರು.

ಖಾಸಗಿ ಸರ್ವೇ ನಂಬರ್ ಪೋಡಿಗೂ ಅಭಿಯಾನ : “ರಾಜ್ಯಾದ್ಯಂತ 22 ಲಕ್ಷ ಖಾಸಗಿ ಸರ್ವೇ ನಂಬರ್​ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾರೆ. ಪ್ರತಿಯೊಬ್ಬರ ಹಿಸ್ಸಾಗೆ ತಕ್ಕಂತೆ ಪ್ರತ್ಯೇಕ ಪಹಣಿ ಮಾಡಿಕೊಡಬೇಕಾದ್ದು ಕಂದಾಯ ಇಲಾಖೆಯ ಮೂಲಕ ಕರ್ತವ್ಯ. ಆದರೆ, ಈವರೆಗೆ ಆ ಕೆಲಸ ಆಗಿಲ್ಲ. ನಾವು ಹೀಗೆ ಪಹಣಿ ಮಾಡಿಕೊಡಲು ಮುಂದಾದರೆ ಕನಿಷ್ಟ 60 ಲಕ್ಷ ಜನರಿಗೆ ಮಾಡಿಕೊಡಬೇಕಾಗುತ್ತದೆ. ನಾವೂ ದರ್ಖಾಸ್ತು ಪೋಡಿ ಕೆಲಸದ ಜೊತೆಗೆ ಅದನ್ನೂ ಮಾಡಿಕೊಡಲು ತೀರ್ಮಾನಿಸಿದ್ದೇವೆ. ಅದೇ ಕಾರಣಕ್ಕೆ ಹಿಂದೆ ಪೋಡಿ ಮುಕ್ತ ಅಭಿಯಾನ ಆರಂಭಿಸಲಾಗಿತ್ತು. ಆದರೆ, ನಮ್ಮನ್ನು ಹುಡುಕಿ ಬಂದವರಿಗೆ ಪಹಣಿ ಮಾಡಿಕೊಡಲಾಯಿತೇ ವಿನಃ ಎಲ್ಲರಿಗೂ ಮಾಡಿಕೊಡಲಾಗಿಲ್ಲ. ಈ ಬಾರಿ ಒಟ್ಟು ಎಷ್ಟು ಬಾಕಿ ಇದೆಯೋ ಅದನ್ನೆಲ್ಲ ಟಾರ್ಗೆಟ್ ಆಗಿ ತಗೊಂಡು ಎಲ್ಲರಿಗೂ ಕೆಲಸ ಮಾಡಿಕೊಡಲಾಗುವುದು” ಎಂದು ಹೇಳಿದರು.

ಬಗರ್ ಹುಕುಂ ವಿಲೆವಾರಿ ಪ್ರಕ್ರಿಯೆ ಆರಂಭ : “ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅನರ್ಹ ಅರ್ಜಿಗಳೇ ಅಧಿಕ. ಈ ಅರ್ಜಿಗಳ ವಿಲೇವಾರಿಗೆ ಈಗಾಗಲೇ ರಾಜ್ಯಾದ್ಯಂತ 160 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳೂ ಕನಿಷ್ಠ ಮಟ್ಟದ ಅರ್ಜಿ ವಿಲೆವಾರಿ ಆಗಬೇಕು, ಮುಂದಿನ ಎಂಟು ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನೂ ವಿಲಲೆವಾರಿಗೊಳಿಸಬೇಕು. ಅಲ್ಲದೆ, ಅರ್ಹರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಈಗಾಗಲೇ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ” ಎಂದು ಸಚಿವರು ತಿಳಿಸಿದರು.

ರಾಜ್ಯಾದ್ಯಂತ ಶೇ. 81.74 ರಷ್ಟು ಆಧಾರ್ ಸೀಡಿಂಗ್: “ರಾಜ್ಯಾದ್ಯಂತ ಈವರೆಗೆ ಶೇ. 81.74 ರಷ್ಟು ಆಧಾರ್ ಸೀಡಿಂಗ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ರಾಜ್ಯಾದ್ಯಂತ 4,09,87,831 ರಷ್ಟು ಜಮೀನುಗಳ ಆಧಾರ್ ಸೀಡಿಂಗ್ ಮಾಡುವುದು ಇಲಾಖೆಯ ಗುರಿ. ಈ ಪೈಕಿ ಸುಮಾರು 61 ಲಕ್ಷ ಜಮೀನುಗಳು ಕೃಷಿಯೇತರ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಇದನ್ನು ಆಧಾರ್ ಸೀಡಿಂಗ್ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನಿವೇಶನಗಳು ಇರುತ್ತದೆ. ನಾವು ಕೃಷಿ ಭೂಮಿಯಲ್ಲಿ ಮಾತ್ರ ಸೀಡಿಂಗ್ ಮಾಡಲು ಸಾಧ್ಯ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ ಅಥೆಂಟಿಫಿಕೇಷನ್ ಕೆಲಸ ಮುಗಿಸಲಾಗಿದ್ದು, ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 81.74 ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ರಾಜ್ಯಾದ್ಯಂತ 48,16,813 ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಲ್ಲೇ ಪಹಣಿ ಮುಂದುವರೆಯುತ್ತಿದೆ. ಈ ಎಲ್ಲರಿಗೂ ಶೀಘ್ರದಲ್ಲಿ ಪಹಣಿ ಖಾತೆ ಆಂದೋಲನದ ಅಡಿಯಲ್ಲಿ ಖಾತೆ ಬದಲಿಸಿಕೊಡಲಾಗುವುದು” ಎಂದು ಅವರು ತಿಳಿಸಿದರು.

ಕಳೆದ ಒಂದು ವರ್ಷದಿಂದ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಅಧಿಕಾರಿಗಳನ್ನು ಗುರುತಿಸಿ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024” ಪ್ರಶಸ್ತಿ ಹಾಗೂ ಅಭಿನಂದನಾ ಪತ್ರಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

ಇದನ್ನೂ ಓದಿ:ಜಮೀನು ಪೋಡಿ, ದುರಸ್ತಿ: ಆನ್​ಲೈನ್​ ನಿರ್ವಹಣೆಗೆ ಹೊಸ ತಂತ್ರಾಂಶ - ಸಚಿವ ಕೃಷ್ಣಬೈರೇಗೌಡ

ABOUT THE AUTHOR

...view details