ಹಾವೇರಿ: ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ರೈತ ಸಂಘ ವಿನೂತನ ರೀತಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದೆ. ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನದ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ಗಳಿಗೆ ರೈತ ಸಂಘ ನೋಟಿಸ್ ಅಂಟಿಸುವ ಮೂಲಕ ಎಚ್ಚರಿಕೆ ನೀಡಿದೆ.
ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲ ಇಲ್ಲ:ಊರೊಳಗೆ ಬಂದು ಸಾಲ ಪಡೆದ ರೈತರಿಗೆ, ಮಹಿಳೆಯರಿಗೆ ಕಿರುಕುಳ ನೀಡುವಂತಿಲ್ಲ ಎಂದು ಮೈಕ್ರೋ ಫೈನಾನ್ಸ್ಗಳಿಗೆ ಎಚ್ಚರಿಕೆಯ ನೋಟಿಸ್ ಅಂಟಿಸುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ಆರಂಭಿಸಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪಾದಯಾತ್ರೆ ಮೂಲಕ ಮೈಕ್ರೋ ಫೈನಾನ್ಸ್ ಕಚೇರಿಗಳಿಗೆ ತೆರಳಿದ ರೈತರು, ನೋಟಿಸ್ ಅಂಟಿಸಿದ್ದಾರೆ. ಬೆಳಗ್ಗೆ ಸಂಜೆ ರೈತರ ಮನೆಗಳಿಗೆ ತೆರಳಿ ಕಿರುಕುಳ ನೀಡುವಂತಿಲ್ಲ. ಕಿರುಕುಳ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಮೈಕ್ರೋ ಫೈನಾನ್ಸ್ಗಳಿಗೆ ರೈತರು ಎಚ್ಚರಿಕೆ ನೀಡಿದರು.
ರೈತ ಸಂಘದಿಂದ ಕಾವಲು ಸಮಿತಿ:ರೈತರು, ಮಹಿಳೆಯರು ಮತ್ತು ಕೂಲಿ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗುತ್ತಿದೆ. ರಿಸರ್ವ್ ಬ್ಯಾಂಕ್ ನಿಯಮದಂತೆ ಬಡ್ಡಿ ವಸೂಲಾತಿ ಮಾಡಬೇಕಿತ್ತು. ಆದರೆ ಶೇ.40ರಷ್ಟು ಬಡ್ಡಿ ವಸೂಲಾತಿ ಮಾಡುತ್ತಿವೆ. ಜೊತೆಗೆ ಪ್ರೋಸಿಸಿಂಗ್ ಶುಲ್ಕ ಅಂತಾನೂ ತೆಗೆದುಕೊಳ್ಳುತ್ತಾರೆ. ಒಟ್ಟಾರೆ ಮೀಟರ್ ಬಡ್ಡಿಯವರಷ್ಟೇ ಮೈಕ್ರೋ ಫೈನಾನ್ಸ್ಗಳು ವಸೂಲಾತಿ ಮಾಡುತ್ತಿವೆ. ಬರೀ ಸರ್ಕಾರ ಕಾನೂನು ಮಾಡುವುದಷ್ಟೇ ಅಲ್ಲ, ಬಡ್ಡಿ ವಸೂಲಾತಿ ಮೇಲೆ ಕಣ್ಣಿಟ್ಟಿರಬೇಕು. ರೈತ ಸಂಘ ಕೂಡ ಕಾವಲು ಸಮಿತಿ ಮಾಡಿ, ಆ ಮೂಲಕ ಫೈನಾನ್ಸ್ಗಳಿಗೆ ಭೇಟಿ ನೀಡಿ ಅನ್ಯಾಯ ಕಂಡು ಬಂದರೆ , ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇವೆ. ಅನ್ಯಾಯವಾಗಿ ಬಡ್ಡಿ ವಸೂಲಾತಿ ಮಾಡುವ ಮೈಕ್ರೋ ಫೈನಾನ್ಸ್ಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಿ ಬಂದ್ ಮಾಡಬೇಕು ಎಂದು ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.