ಮೈಸೂರು: "ರೈತರ ಪುತ್ರರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು" ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಂದ ಶೇ.10ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎನ್ಡಿಆರ್ಎಫ್ ಮಾನದಂಡ ಬದಲಾಗಬೇಕು. ಮಳೆಹಾನಿ, ಬರ ಪರಿಹಾರ, ಪ್ರಕೃತಿ ವಿಕೋಪ ಪರಿಹಾರದ ಮಾನದಂಡ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು" ಎಂದರು.
"ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ 10 ಸಾವಿರ ರೂ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ರಾಜ್ಯದಲ್ಲಿ 10 ಲಕ್ಷ ರೈತರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ, ಕೂಡಲೇ ಅವರಿಗೆ ಬೇಷರತ್ತಾಗಿ ಸಾಗುವಳಿ ಪತ್ರ ನೀಡಬೇಕು. ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಆನ್‌ಲೈನ್ ಗೇಮ್, ಜೂಜು ರಾಜ್ಯದಲ್ಲಿ ನಿಷೇಧಿಸಬೇಕು ಎಂಬ ತಮ್ಮ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು" ಎಂದು ಹೇಳಿದರು.
"ಕೃಷಿ ಸಾಲ ನೀತಿ ಬದಲಾಗಬೇಕು. ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ರೈತರ ಕೃಷಿ ಸಾಲ ವಸೂಲಾತಿಗಾಗಿ ರೂಪಿಸಿರುವ ಸರ್ಪ್ರೈಸಿ ಕಾಯ್ದೆಯನ್ನು ರದ್ದುಗೊಳಿಸಬೇಕು. ಕೃಷಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು" ಎಂದು ಒತ್ತಾಯಿಸಿದರು.