ಕರ್ನಾಟಕ

karnataka

ETV Bharat / state

ಗ್ರಾಹಕರಿಗೆ ಹೊರೆಯಲ್ಲದ ಭಾರ, ರೈತರಿಗಿಲ್ಲ ಹೆಚ್ಚುವರಿ ಲಾಭ: ಹಾಲು ದರ ಪರಿಷ್ಕರಣೆ ಹಿಂದಿದೆ ಮಾರ್ಕೆಟಿಂಗ್ ಮಂತ್ರ - Milk Price Revision

ಹಾಲಿನ ದರ ಪರಿಷ್ಕರಣೆಯ ಹಿಂದೆ ಮಾರ್ಕೆಟಿಂಗ್ ತಂತ್ರ ಅಡಗಿದೆ. ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ವಿಶೇಷ ಹೊರೆಯಿಲ್ಲ ಎನ್ನಬಹುದಾದರೂ, ರೈತರಿಗೂ ಹೆಚ್ಚು ಲಾಭವಿಲ್ಲ.

By ETV Bharat Karnataka Team

Published : Jun 26, 2024, 7:15 PM IST

NO EXTRA PROFIT  MARKETING SYSTEM  FARMERS  BENGALURU
ಹಾಲು ದರ ಪರಿಷ್ಕರಣೆ ಹಿಂದಿದೆ ಮಾರ್ಕೆಟಿಂಗ್ ಕಹಾನಿ (ETV Bharat)

ಬೆಂಗಳೂರು: ಇಂದಿನಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಂಎಫ್ ನಂದಿನಿ ಹಾಲಿನ ದರವನ್ನು ಪರಿಷ್ಕರಿಸಿದೆ. ಈವರೆಗೂ ಕೇವಲ ದರ ಮಾತ್ರ ಪರಿಷ್ಕರಣೆ ಮಾಡುತ್ತಿದ್ದ ಕೆಎಂಎಫ್ ಈ ಬಾರಿ ಹಾಲು ಮತ್ತು ದರ ಎರಡನ್ನೂ ಪರಿಷ್ಕರಣೆ ಮಾಡಿದೆ. ಇದೊಂದು ರೀತಿಯಲ್ಲಿ ಗ್ರಾಹಕರಿಗೆ ಹೊರೆಯಲ್ಲದ ಭಾರ. ಇದರ ಹಿಂದಿನ ಮರ್ಮದ ಕುರಿತ ವರದಿ ಇಲ್ಲಿದೆ.

ನಂದಿನಿ ಹಾಲಿನ ದರ ಇಂದಿನಿಂದ ಬದಲಾಗಿದೆ. ಎಲ್ಲಾ ಮಾದರಿಯ ಹಾಲಿಗೂ ದರ ಪರಿಷ್ಕರಣೆ ಮಾಡಲಾಗಿದೆ. ಅರ್ಧ ಲೀಟರ್ ಮತ್ತು ಒಂದು ಲೀಟರ್​ನ ಎರಡೂ ಮಾದರಿಗೂ ತಲಾ ಎರಡು ರೂ.ಗಳನ್ನು ಹೆಚ್ಚಿಸಲಾಗಿದೆ. ಇದಕ್ಕೆ ಬದಲಾಗಿ ತಲಾ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ಹಾಗಾಗಿ ಇದನ್ನು ದರ ಹೆಚ್ಚಳ ಎನ್ನಲು ಸಾಧ್ಯವಿಲ್ಲ. ಆದರೂ ಒಂದು ರೀತಿಯಲ್ಲಿ ಗ್ರಾಹಕರ ಜೇಬಿಗೆ ಬೀಳುವ ಕತ್ತರಿಯಾಗಿದೆ ಎಂದರೆ ತಪ್ಪಲ್ಲ.

ಸದ್ಯ ರಾಜ್ಯದಲ್ಲಿ ಹೈನು ಕೃಷಿ ಬಂಪರ್ ಇಳುವರಿ ನೀಡುತ್ತಿದೆ. ಹೈನೋದ್ಯಮ ಉತ್ತುಂಗದಲ್ಲಿದೆ. ಶೇ.15 ರಷ್ಟು ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದು ಕೆಎಂಎಫ್​ನಲ್ಲಿ ಗರಿಷ್ಠ ಪ್ರಮಾಣದ ಹಾಲು ಉತ್ಪಾದನೆಯಾಗಿತ್ತು. ಆದರೆ ಈ ಬಾರಿ ಮೊನ್ನೆಯಷ್ಟೇ 98.17 ಲಕ್ಷ ಲೀಟರ್​ಗೆ ತಲುಪಿ ನಂತರ 99 ಲಕ್ಷ ಲೀಟರ್ ಅನ್ನೂ ದಾಟಿದೆ. ಈಗ ಕೋಟಿ ಲೀಟರ್ ಸನಿಹ ಬಂದು ನಿಂತಿದೆ. ಗರಿಷ್ಠ ಬಳಕೆಯ ಎಲ್ಲ ಅವಕಾಶದ ಹೊರತಾಗಿಯೂ 9 ಲಕ್ಷ ಲೀಟರ್ ಹಾಲು ಹೆಚ್ಚುವರಿಯಾಗಿ ಕೆಎಂಎಫ್​ಗೆ ಬರುತ್ತಿದೆ. ಇದನ್ನು ಯಾವ ರೀತಿ ವಿಲೇವಾರಿ ಮಾಡಬೇಕೆನ್ನುವ ಆಲೋಚನೆ ಮಾಡಿ ಕಡೆಯದಾಗಿ ಗ್ರಾಹಕರ ಕಡೆಗೆ ಸರಬರಾಜು ಮಾಡುವುದೊಂದೇ ಮಾರ್ಗ ಎನ್ನುವ ನಿಲುವಿಗೆ ಬಂದು ಪ್ರತಿ ಪ್ಯಾಕೆಟ್​ನಲ್ಲೂ ಹೆಚ್ಚುವರಿ 50 ಎಂಎಲ್ ಹಾಲು ನೀಡಿ ಹೆಚ್ಚುವರಿ ಹಣ ಸಂಗ್ರಹಿಸುವ ನಿರ್ಧಾರ ಮಾಡಿದೆ.

50 ಎಂಎಲ್ ಹಾಲು ಹೆಚ್ಚಳದಿಂದ 3.50 ಲಕ್ಷ ಲೀಟರ್ ಹಾಲು ಮಾರಾಟ:ಅರ್ಧ ಲೀಟರ್ ಹಾಗು ಒಂದು ಲೀಟರ್​ನ ಪ್ರತಿ ಪ್ಯಾಕೆಟ್​ನಲ್ಲಿ ತಲಾ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡುತ್ತಿರುವುದರಿಂದಾಗಿ ಹೆಚ್ಚುವರಿ 50 ಎಂಎಲ್​ನ ಒಟ್ಟು ಮಾರಾಟವೇ 3.50 ಲಕ್ಷ ಲೀಟರ್ ಆಗಿದೆ. ಇದು ನೇರವಾಗಿ ಹಾಲಿನ ರೂಪದಲ್ಲಿಯೇ ಹೆಚ್ಚುವರಿ ಹಾಲಿನ ಮೂರನೇ ಒಂದು ಭಾಗದಷ್ಟು ಹಾಲನ್ನು ಖರ್ಚು ಮಾಡಿದಂತಾಗಲಿದೆ. ಇದು ಕೆಎಂಎಫ್​ಗೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಆರ್ಥಿಕ ನಷ್ಟ ತಡೆದಂತಾಗಿದೆ.

ಹಾಲಿನ ಪುಡಿ: ನಂದಿನಿ ಹಾಲಿಗೆ ಪ್ರೋತ್ಸಾಹ ಧನ ನೀಡಲು ಆರಂಭಿಸಿದ ನಂತರ ಹೈನುಗಾರಿಕೆಯ ವಿಸ್ತೀರ್ಣ ಹೆಚ್ಚಾಗಿದ್ದು, ಗರಿಷ್ಠ ಪ್ರಮಾಣದ ಹಾಲು ಉತ್ಪಾದನೆಯಾಗಿದೆ. ನಂದಿನಿ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ತಿನಿಸಿಗಳು ಸೇರಿದಂತೆ ಹಾಲಿನ ಉತ್ಪನ್ನಗಳ ಉತ್ಪಾದನೆಯ ಬಳಿಕವೂ ದೊಡ್ಡ ಪ್ರಮಾಣದಲ್ಲಿ ಹಾಲು ಉಳಿಯುತ್ತಿದ್ದ ಹಿನ್ನೆಲೆಯಲ್ಲಿ ಹಾಲಿನ ಪೌಡರ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಅಂಗನವಾಡಿಗಳಿಗೆ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಬದಲು ಹಾಲಿನ ಪುಡಿ ನೀಡುವ ಮೂಲಕ ಹಾಲಿನ ಪುಡಿ ಖರ್ಚು ಮಾಡಲು ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. ಆದರೂ ಹಾಲಿನ ಪುಡಿ ಉತ್ಪಾದನಾ ಪ್ರಮಾಣ ಹೆಚ್ಚಾಗಿ ದಾಸ್ತಾನು ಹೆಚ್ಚಾಗುತ್ತಿದೆ. ಹಾಗಾಗಿ ಈಗ ಮತ್ತೆ ಹೆಚ್ಚುವರಿಯಾಗಿ ಹಾಲಿನ ಪುಡಿ ತಯಾರಿಸಿಟ್ಟುಕೊಳ್ಳುವ ಸ್ಥಿತಿಯಲ್ಲಿಲ್ಲದ ಕೆಎಂಎಫ್ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟು ಅನುಮತಿ ಪಡೆದುಕೊಂಡು ಪ್ಯಾಕೆಟ್​ಗಳಲ್ಲಿಯೇ ಹೆಚ್ಚುವರಿ ಹಾಲು ಸೇರಿಸಿ ಮಾರಾಟ ಮಾಡುವ ಘೋಷಿಸಿದೆ. ಅದರಂತೆ ಇಂದಿನಿಂದಲೇ ಹೊಸ ದರದಲ್ಲಿ ಹಾಲಿನ ಮಾರಾಟವನ್ನೂ ಆರಂಭಿಸಿದೆ.

ರೈತರಿಗೇನು ಲಾಭ?: ಇಂದಿನ ಹಾಲು ದರ ಪರಿಷ್ಕರಣೆಯ ಹಣದಲ್ಲಿ ನೇರವಾಗಿ ರೈತರಿಗೆ ಯಾವುದೇ ಪಾಲು ಇಲ್ಲ. ಹೆಚ್ಚಿನ ಹಾಲು ಮಾರಾಟ ಮಾಡಿ ಅದಕ್ಕೆ ತಕ್ಕಂತೆ ಹಣ ಸಂಗ್ರಹಣೆ ಮಾಡುತ್ತಿದೆ. ರೈತರಿಂದ ಖರೀದಿ ಮಾಡಿದ ಹಾಲನ್ನೇ ಹೆಚ್ಚುವರಿಯಾಗಿ ಮಾರಾಟ ಮಾಡುತ್ತಿರುವುದರಿಂದ ಅದರಲ್ಲಿ ರೈತರಿಗೆ ಪ್ರತ್ಯೇಕ ಪಾಲು ಸಿಗುವುದಿಲ್ಲ. ಹೆಚ್ಚುರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲಿನ ಖರೀದಿಯಲ್ಲಿ ಕಡಿತ ಮಾಡದಿರುವುದೇ ರೈತರಿಗೆ ಸಿಗುತ್ತಿರುವ ಲಾಭ.

ಗ್ರಾಹಕರಿಗೆ ಬರೆ: ವಾಣಿಜ್ಯ ಬಳಕೆಯ ಗ್ರಾಹಕರಿಗೆ ಈ ಹಾಲಿನ ದರ ಪರಿಷ್ಕರಣೆಯ ಬಿಸಿ ತಟ್ಟುವುದಿಲ್ಲ. ಹೋಟೆಲ್, ಹಾಲಿನ ಉತ್ಪನ್ನಗಳ ತಯಾರಕರಿಗೆ ಹೆಚ್ಚುವರಿ ಹಾಲು ಸಿಗುತ್ತದೆ. ಹೀಗಾಗಿ ಅವರು ಹೆಚ್ಚಿನ ಹಣ ಕೊಡುತ್ತಾರೆ. ಆದರೆ ಗೃಹ ಬಳಕೆ ಗ್ರಾಹಕರಿಗೆ ಇದು ಹೊರೆಯಾಗಲಿದೆ. ಬಡ, ಮಧ್ಯಮ ವರ್ಗದ ಗ್ರಾಹಕರು ಪ್ರತಿನಿತ್ಯ ಅರ್ಧ ಲೀಟರ್ ಇಲ್ಲವೇ ಒಂದು ಲೀಟರ್ ಹಾಲು ಖರೀದಿ ಮಾಡುತ್ತಾರೆ. ಅವರಿಗೆ ಹೆಚ್ಚುವರಿ ಹಾಲಿನ ಅಗತ್ಯ ಇರುವುದಿಲ್ಲ. ಆದರೂ ಅವರು ಈಗ ಹೆಚ್ಚುವರಿ‌ 50 ಎಂಎಲ್ ಹಾಲನ್ನು ಅನಗತ್ಯವಾಗಿ ಖರೀದಿಸಲೇಬೇಕಾಗಿದೆ. ಹಾಗಾಗಿ ಈ ಗ್ರಾಹಕರ ಜೇಬಿಗೆ ಪ್ರತಿನಿತ್ಯ 2 ರೂ. ಕತ್ತರಿ ಬೀಳಲಿದೆ‌. ಹಾಗಾಗಿ ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಹೊರೆಯಲ್ಲದ ಭಾರವಾಗಿ ಪರಿಣಮಿಸಿದೆ.

ಇನ್ನು ಹಾಲಿನ ದರ ಪರಿಷ್ಕರಣೆಯನ್ನು ಇಡೀ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಮರ್ಥಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹಾಲಿನ ದರ ಪರಿಷ್ಕರಣೆ ಅನಿವಾರ್ಯ ಎಂದಿದ್ದಾರೆ.

ಸಿಎಂ ಹೇಳುವುದೇನು?: ಹೆಚ್ಚುವರಿ ಉದ್ಪಾದನೆಯಾಗುತ್ತಿರುವ ಹಾಲನ್ನ ಚೆಲ್ಲಿ ಬಿಡಲೇ ನಾನು. ಹಾಲನ್ನು ಚೆಲ್ಲಲು ಸಾಧ್ಯವಾಗುತ್ತದೆಯಾ?. ರೈತರಿಂದ ನಾವು ಖರೀದಿ ಮಾಡಲ್ಲ ಎನ್ನಬೇಕಾ?. ಇದೆಲ್ಲಾ ಸಾಧ್ಯವಿಲ್ಲ. ಹಾಗಾಗಿ ಜನ ಹೆಚ್ಚುವರಿ ಹಾಲು ಖರೀದಿ ಮಾಡಲೇಬೇಕು. ಜಾಸ್ತಿ ಹಾಲು ಕೊಡುತ್ತಿದ್ದೇವೆ. ಜಾಸ್ತಿ ಹಣ ಪಡೆಯುತ್ತಿದ್ದೇವೆ. ಇಲ್ಲಿ ದರ ಏರಿಕೆ ಹೇಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಲಿನ ದರ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಡಿಸಿಎಂ ಹೇಳುವುದೇನು?: ಹಸುಗಳನ್ನು ಸಾಕಲಾಗದೆ ಇಂದು ರೈತರು ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ. ಈ ಹಿಂದೆ ಮೂರು ರೂ., ಈಗ ಎರಡು ರೂ. ಹೆಚ್ಚಳ ಮಾಡಿದ್ದು, ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೂಡ ದರ ಪರಿಷ್ಕರಣೆ ಸಮರ್ಥಿಸಿಕೊಂಡರು.

ಪಾರ್ಟ್ ಟೈಂ ಸ್ಕೀಮ್:ಇನ್ನು ಹೆಚ್ಚುವರಿ ಹಾಲು ನೀಡಿ ಹೆಚ್ಚುವರಿ ಹಣ ಪಡೆಯುವ ವ್ಯವಸ್ಥೆ ಕೇವಲ ತಾತ್ಕಾಲಿಕ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಹಿತಿ ನೀಡಿದ್ದಾರೆ. ಹಾಲು ಮತ್ತು ಹಾಲಿನ ಇತರ ಎಲ್ಲ ಉತ್ಪನ್ನಗಳು ಮತ್ತು ಹಾಲಿನ ಪುಡಿ ತಯಾರಿಕೆ ಬಳಿಕವೂ ಹೆಚ್ಚುವರಿ ಹಾಲು ಕೆಎಂಎಫ್​ಗೆ ಬರುತ್ತಿದೆ. ಗರಿಷ್ಠ ಸರಬರಾಜು ನಂತರವೂ ಹೆಚ್ಚುವರಿಯಾಗಿ 9 ಲಕ್ಷ ಲೀಟರ್ ಹಾಲು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.15ರಷ್ಟು ಹೆಚ್ಚುವರಿ ಹಾಲು ಬರುತ್ತಿದೆ. ಹಾಗಾಗಿ ಅನಿವಾರ್ಯವಾಗಿ ನಾವು ಹೆಚ್ಚುವರಿ ಹಾಲನ್ನು ಈ ರೀತಿ ಮಾರಾಟದ ಮೂಲಕ ಸರಿದೂಗಿಸಲು ಮುಂದಾಗಿದ್ದೇವೆ. ಹಾಲಿನ ಸಂಗ್ರಹ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಹೆಚ್ಚುವರಿ 50 ಎಂಎಲ್ ನೀಡಿ ಹೆಚ್ಚುವರಿ 2 ರೂ.ಸಂಗ್ರಹದ ವ್ಯವಸ್ಥೆ ವಾಪಸ್ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೆಎಂಎಫ್ ಮಾಡಿರುವ ಹಾಲಿನ ದರ ಪರಿಷ್ಕರಣೆ ಸಂಪೂರ್ಣವಾಗಿ ಮಾರ್ಕೆಟಿಂಗ್ ತಂತ್ರದ ಭಾಗವಾಗಿದೆ. ಹೆಚ್ಚುವರಿ ಹಾಲನ್ನು ಇರುವ ವ್ಯವಸ್ಥೆಯೊಳಗೆ ಖಚಿತವಾಗಿ ಮಾರಾಟ ಮಾಡುವ ಯೋಜಿತ ತಂತ್ರವಾಗಿದೆ ಎನ್ನುವುದು ಇಲ್ಲಿ ಸ್ಪಷ್ಟ.

ಇದನ್ನೂ ಓದಿ:ಬೆಲೆ ಏರಿಸಿದ ಸಿದ್ದರಾಮಯ್ಯ ವಚನ ಭ್ರಷ್ಟರು: ಹೆಚ್.ವಿಶ್ವನಾಥ್ ವಾಗ್ದಾಳಿ - H Vishwanath

ABOUT THE AUTHOR

...view details