ಕರ್ನಾಟಕ

karnataka

ETV Bharat / state

ಫೆಂಗಲ್​ ಚಂಡಮಾರುತದ ಎಫೆಕ್ಟ್​: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತದ ಕಟಾವು - FENGAL EFFECT ON HARVEST PADDY

ಫೆಂಗಲ್​ ಚಂಡಮಾರುತದ ಪರಿಣಾಮ ಕೊಯ್ಲು ಮಾಡಬೇಕಿದ್ದ ಭತ್ತದ ಮೇಲೆ ತುಂತುರು ಹನಿ ಬೀಳುತ್ತಿದ್ದು ರೈತರು ಭತ್ತ ಕಟಾವು ಮಾಡಲು ಹಿಂದೇಟು ಹಾಕಿದ್ದಾರೆ.

FENGAL EFFECT ON HARVEST PADDY
ಫೆಂಗಲ್​ ಚಂಡಮಾರುತ ಎಫೆಕ್ಟ್​: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತ ಕಟಾವು (ETV Bharat)

By ETV Bharat Karnataka Team

Published : Dec 4, 2024, 11:37 AM IST

ದಾವಣಗೆರೆ: ಭತ್ತದ ಫಸಲು ಕೊಯ್ಲಿಗೆ ಬಂದಿರುವ ಈ ಹೊತ್ತಲ್ಲೇ 'ಫೆಂಗಲ್​ ಚಂಡಮಾರುತ' ಕಂಠಕವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ 50-60 % ಭತ್ತವನ್ನು ರೈತರು ಕೊಯ್ಲು ಮಾಡಿದ್ದಾರೆ. ಉಳಿದ 40% ರಷ್ಟು ಭತ್ತವನ್ನು ಕೊಯ್ಲು ಮಾಡಬೇಕಾಗಿತ್ತು. ಆದರೆ, ತುಂತುರು ಹನಿ ಬೀಳುತ್ತಿರುವ ಕಾರಣ ಕೊಯ್ಲು ಅಸಾಧ್ಯವಾಗಿದೆ. ಹೀಗಾಗಿ ರೈತರು ಫೆಂಗಲ್ ಚಂಡಮಾರುತ ಕಡಿಮೆಯಾದ ಬಳಿಕವಷ್ಟೇ ಭತ್ತ ಕಟಾವು ಮಾಡಲು ಚಿಂತನೆ ನಡೆಸಿ, ಭತ್ತವನ್ನು ಕೊಯ್ಲು ಮಾಡದೇ ಜಮೀನಿನಲ್ಲೇ ಬಿಟ್ಟಿರುವುದು ಕಂಡು ಬಂದಿದೆ.

ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಫಸಲಿನ ಕಟಾವು ಪ್ರಕ್ರಿಯೆ ವಿಳಂಬವಾಗಿದೆ. ಜಿಲ್ಲೆಯಲ್ಲಿ ಭತ್ತ ಪ್ರಮುಖ ವಾಣಿಜ್ಯ ಬೆಳೆ ಆಗಿದ್ದರಿಂದ ಈ ಬಾರಿ ಅಂದಾಜು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇ 50-60ರಷ್ಟು ಭತ್ತವನ್ನು ರೈತರು ಕೊಯ್ಲು ಮಾಡಿದ್ದಾರೆ. ಉಳಿದ ಭತ್ತವನ್ನು ಕಟಾವು ಮಾಡಿದರೆ ಭತ್ತ ತೇವಾಂಶ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇರಲಿದೆ ಎಂಬ ಕಾರಣಕ್ಕೆ ಭತ್ತದ ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ.

ಫೆಂಗಲ್​ ಚಂಡಮಾರುತ ಎಫೆಕ್ಟ್​: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತ ಕಟಾವು (ETV Bharat)

ಕಟಾವು ಮಾಡದಿದ್ದರೆ ಕಾಳು ಉದುರುವ ಸಮಸ್ಯೆ: ಭತ್ತದ ಕೊಯ್ಲು ಕಟಾವು ಮಾಡಲು ರೈತರು ವಿಳಂಬ ಧೋರಣೆ ಅನುಸರಿಸಿದರೆ ಭತ್ತ ಕಾಳು ಉದುರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕೆಲ ರೈತರು ಮೋಡ ಮುಸುಕಿದ ವಾತಾವರಣದ ನಡುವೆಯೂ ಕಟಾವು ಮುಂದುವರಿಸಿದ್ದಾರೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್​ ಚಿಂತಾಲ್​ ಅವರು ದೂರವಾಣಿಯಲ್ಲಿ ಪ್ರತಿಕ್ರಿಯಿಸಿ "ಫೆಂಗಲ್​ ಚಂಡಮಾರುತದಿಂದ ಮಳೆಯಾಗಿಲ್ಲ, ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಆಗಿದೆ. ಸ್ವಲ್ಪ ಮಟ್ಟಿಗೆ ಭತ್ತದ ಕಟಾವಿಗೆ ತೊಂದರೆಯಾಗಿದೆ. ಈ ಚಂಡಮಾರುತ ಕಡಿಮೆ‌ ಆದ ಮೇಲೆ ಭತ್ತ ಕಟಾವು ಮಾಡಿದರೆ ಒಳ್ಳೆದು" ಎಂದು ರೈತರಿಗೆ ಸಲಹೆ ನೀಡಿದರು.

ರೈತ ಹೇಳುವುದೇನು:ಈ ವಿಚಾರವಾಗಿ ರೈತ ಮುಖಂಡ ಕೋಳೆನಹಳ್ಳಿ ಸತೀಶ್ ಅವರು ಪ್ರತಿಕ್ರಿಯಿಸಿ "ಮೂರ್ನಾಲ್ಕು ದಿನಗಳಿಂದ ಮೋಡಮುಸುಕಿದ ವಾತಾವರಣ ಇದೆ. ಫೆಂಗಲ್ ಚಂಡ ಮಾರುತದಿಂದ ಭತ್ತ ಕಟಾವು ಮಾಡಿದರೆ ಒಣಗಿಸಲು ತೊಂದರೆ ಆಗಿದೆ. ಒಣ ಹವೆ ಇರುವುದರಿಂದ ಭತ್ತವನ್ನು ಜಮೀನಿನಲ್ಲಿ ಬಿಡಲಾಗಿದೆ‌. ಶೇ 50 ರಷ್ಟು ಭತ್ತದ ಕಟಾವು ಬಾಕಿ ಇದೆ. ಜಿಲ್ಲೆಯಲ್ಲಿ ತುಂತುರು ಹನಿ ಇದೆ. ಚಂಡಮಾರುತ ಕಡಿಮೆಯಾದ ಮೇಲೆ ನೋಡಿಕೊಂಡು ರೈತರು ಕಟಾವು ಮಾಡುತ್ತಾರೆ. ತೇವಾಂಶ ಹೆಚ್ಚಾಗುತ್ತದೆ ಎಂಬ ಕಾರಣ ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ರೈತರು ಬೆಳೆ ಕಟಾವು ಬಂದರು ಜಮೀನಿನಲ್ಲೇ ಭತ್ತ ಬಿಟ್ಟಿದ್ದಾರೆ" ಎಂದರು.

ಇದನ್ನೂ ಓದಿ:ರೈತರೊಂದಿಗೆ ಸೇರಿ ಶಾಲಾ ವಿದ್ಯಾರ್ಥಿನಿಯರ ಭತ್ತದ ನಾಟಿ; ಕೈಗೆ ಬಂತು 60 ಚೀಲ ಫಸಲು; 'ಫಲ' ನೀಡಿದ ಹೆಡ್‌ ಮಾಸ್ಟರ್‌ ಕೃಷಿ ಪಾಠ

ABOUT THE AUTHOR

...view details