ಕರ್ನಾಟಕ

karnataka

ETV Bharat / state

ಧಾರಾಕಾರ ಮಳೆ: ಬೆಳೆ ನೀರು ಪಾಲು, ಉಪವಾಸ ಕುಳಿತ ರೈತರು - crop damage

ಬ್ರಹ್ಮಾವರದ ಭಾಗದಲ್ಲಿ ನೆರೆಯಿಂದ ಕೃಷಿ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ರೈತರು ಮತ್ತೊಮ್ಮೆ ನಾಟಿ ಮಾಡಬೇಕಾಗಿದೆ.

farmers-conduct-protest
ಉಪವಾಸ ಕುಳಿತ ರೈತರು (ETV Bharat)

By ETV Bharat Karnataka Team

Published : Aug 7, 2024, 11:04 PM IST

ಜಿಲ್ಲಾಧಿಕಾರಿ ಡಾ. ಕೆ‌ ವಿದ್ಯಾ ಕುಮಾರಿ (ETV Bharat)

ಉಡುಪಿ:ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ಅಧಿಕವಾದ್ದರಿಂದ ಬೆಳೆ ಪೂರ್ಣ ವರುಣನ ಪಾಲಾಗಿದೆ. ಹೀಗಾಗಿ ರೈತರು ಅಧಿಕಾರಿಗಳ ಹಾಗೂ ದೇವರ ಮೊರೆಗೆ ಹೋಗಿದ್ದು, ಉಪವಾಸ ಕೂರುವ ಪರಿಸ್ಥಿತಿ ಎದುರಾಗಿದೆ.

ಬ್ರಹ್ಮಾವರ ಭಾಗದಲ್ಲಿ ನೆರೆಯಿಂದ ಕೃಷಿ ಸಂಪೂರ್ಣ ನಾಶ: ಬ್ರಹ್ಮಾವರ ತಾಲೂಕಿನ ಉಪ್ಪೂರು, ಕುಂಜಾಲು, ಪೇತ್ರಿ, ಸಂತೆಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ನೆರೆಯ ಪರಿಣಾಮ ಕೃಷಿಯು ಹಾನಿಯಾಗಿದೆ. ರೈತರು ನೇಜಿಯನ್ನು ಮತ್ತೊಮ್ಮೆ ನೆಡಬೇಕಾದ ಸಂದರ್ಭ ಒದಗಿಬಂದಿದೆ. ಈ‌ ಬಗ್ಗೆ ಜಿಲ್ಲಾಧಿಕಾರಿಗಳು ಕೃಷಿಕರಿಗೆ ಬೆಳೆ ಹಾನಿಯಾದ ಬಗ್ಗೆ ಅನುದಾನ ಕೊಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

ಕೋಟದಲ್ಲಿ ಇಂದು ಐತಿಹಾಸಿಕ ಬೃಹತ್ ಉಪವಾಸ ಸತ್ಯಾಗ್ರಹ : ಮಳೆಗಾಲದಲ್ಲಿ ಮಳೆಯ ಪ್ರಮಾಣವು ಅಧಿಕವಾದ ಪರಿಣಾಮವಾಗಿ ಬೆಳೆಯೆಲ್ಲ ನೆರೆಯಲ್ಲಿ ತತ್ತರಿಸಿ ಹೋಗಿದ್ದು, ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಅನುದಾನ ಬಿಡುಗಡೆಯಾಗಬೇಕು. ಕೃತಕ ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ‌ಎಂಬುದಾಗಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.

ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣಿತ ತಂತ್ರಜ್ಞರ ತಂಡದಿಂದ ‌ಸರ್ವೇ ನಡೆಸಿ ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ತೆಕ್ಕಟ್ಟೆ, ಮಣೂರು, ಮಲ್ಯಾಡಿ, ಹೊಸಾಳ, ನಾಗರಮಠಚೆಕ್ ಡ್ಯಾಮ್, ಸೂಲಡ್ಪು-ಮಡಿವಾಳಸಾಲು, ಕೈಕೂರು, ಗಿಳಿಯಾರು, ಕಾರ್ಕಡ, ಚಿತ್ರಪಾಡಿ, ಕುದ್ರುಮನೆ ಡ್ಯಾಮ್ ಸೇರಿದಂತೆ ಅನೇಕ ಗ್ರಾಮದಲ್ಲಿರುವ ಡ್ಯಾಮ್, ತೂಗು ಸೇತುವೆ ತೆಗೆದು ಪಿಲ್ಲರ್ ಸೇತುವೆ ನಿರ್ಮಾಣವಾಗಬೇಕು. ಹೊಳೆಯಿಂದ ಹೂಳು ತೆಗೆದು ಸುರಕ್ಷಿತವಾಗಿ ನೀರು ಹರಿಯುವ ವ್ಯವಸ್ಥೆ ಮಾಡಬೇಕು ಎಂಬುದಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.

'ಗದ್ದೆಗಳಲ್ಲಿ ಬೆಳೆದ ನೇಜಿ ಮೇಲೆ ನೆರೆಯ ನೀರು ಹರಿದು ನೇಜಿಗಳೆಲ್ಲ ಕೊಳೆತು ಹೋಗಿದ್ದು, ರೈತನ ಮೈಮೆಲೆ ಗಾಯದ ಮೇಲೆ ಇನ್ನಷ್ಟು ಬರೆ ಎಳೆದಂತಾಗಿದೆ. ನೆರೆ ಬರಲು ಸರಿಯಾದ ಕಾರಣ ಹೂಳು. ನದಿಯ ನೀರು ಸರಾಗವಾಗಿ ಹರಿಯಲು ಸರಿಯಾದ ಮಾರ್ಗವಿಲ್ಲದೆ ಅಲ್ಲಲ್ಲಿ ಹೂಳು ತುಂಬಿದ್ದು, ಅಧಿಕಾರಿಗಳು ಇದರ ಬಗ್ಗೆ ಎಚ್ಚೆತ್ತು ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಹೂಳು ತುಂಬುವವರೆಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ವಚ್ಚತಾ ಕಾರ್ಯ ಮಾಡದೇ ಹಾಗೆ ಬಿಟ್ಟ ಪರಿಣಾಮ ಮಳೆಗಾಲದಲ್ಲಿ ಗದ್ದೆಗಳಲ್ಲಿ, ಕಾಲು ಸಂಕಗಳಲ್ಲಿ ಹೂಳು ತುಂಬಿ ನೀರು ಸರಿಯಾಗಿ ಹರಿಯದೆ ಕೃತಕ ನೆರೆಗೆ ಕಾರಣರಾಗಿದ್ದಾರೆ' ಎಂದು ಪ್ರಗತಿಪರ ಕೃಷಿಕರಾದ ಜಯರಾಮ ಶೆಟ್ಟಿ ಅಳಲನ್ನು ವ್ಯಕ್ತಪಡಿಸಿದರು.

ಉಪವಾಸ ಸತ್ಯಾಗ್ರಹವನ್ನು ನಡೆಸುವ ಕೃಷಿಕರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಆಲಿಸಬೇಕು. ನಮ್ಮ ಸಮಸ್ಯೆಗೆ ಸ್ವತಃ ಜಿಲ್ಲಾಧಿಕಾರಿಗಳು ಬಂದು ಮನವಿಯನ್ನು ಸ್ವೀಕರಿಸಿ ಭರವಸೆಯನ್ನು ನೀಡಬೇಕು ಎಂಬುದಾಗಿ ಕೃಷಿಕರು ಪಟ್ಟುಹಿಡಿದರು.

ಬಳಿಕ ಜಿಲ್ಲಾಧಿಕಾರಿಗಳು ಪ್ರತಿಭಟನೆ ನಡೆಸುವ ಕೃಷಿಕರ ಬಳಿ ಆಗಮಿಸಿ ಮನವಿಯನ್ನು ಸ್ವೀಕರಿಸಿ ಈ ಎಲ್ಲಾ ವಿಚಾರಗಳನ್ನು ಉಸ್ತುವಾರಿ ಸಚಿವರಲ್ಲಿ ಹಾಗೂ ಅಧಿಕಾರಿಗಳ ಬಳಿ ಚರ್ಚೆ ನಡೆಸಿ, 'ಸಂಪೂರ್ಣ ಸರಿಯಾದ ವ್ಯವಸ್ಥೆ ಮಾಡಿಕೊಡುತ್ತೇವೆ. ಮಾತ್ರವಲ್ಲದೆ, ಮರಳುಗಾರಿಕೆ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸುತ್ತೇವೆ. ಕೃಷಿಕರಿಗಾದ ನಷ್ಟಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಯತ್ನ ಮಾಡುತ್ತೇನೆ' ಎಂದು ಜಿಲ್ಲಾಧಿಕಾರಿ ಡಾ.ಕೆ‌.ವಿದ್ಯಾ ಕುಮಾರಿಯವರು ಭರವಸೆಯನ್ನು ನೀಡಿದರು.

ನಾಟಿ ಮಾಡಿದ ಗದ್ದೆಗಳನ್ನೆಲ್ಲ ಮುಳುಗಿಸಿದ ಹೊಳೆ : ಜಿಲ್ಲೆಯಲ್ಲಿ ಈ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮಳೆ ಬಿದ್ದಿದೆ. ಜುಲೈ ತಿಂಗಳಲ್ಲಿ ಮಳೆರಾಯ ಆಘಾತವನ್ನೇ ಕೊಟ್ಟಿದ್ದ. ಈಗಾಗಲೇ 3200 ಮಿಲಿ ಮೀಟರ್​ಗಿಂತ ಹೆಚ್ಚು ಮಳೆ ಬಿದ್ದಾಗಿದೆ. ಮಳೆ ನಿಂತರೂ ಹೊಳೆಯ ನೀರು, ಗದ್ದೆ ತೋಟ ಜನವಸತಿ ಪ್ರದೇಶಗಳಲ್ಲಿ ನಿರಂತರವಾಗಿ ಹರಿಯುತ್ತಿದೆ. ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ ನಡುವೆ ಹರಿಯುವ ಮಲ್ಯಾಡಿ ಕೋಟ ಹೊಳೆ ನಾಟಿ ಮಾಡಿದ ಗದ್ದೆಗಳನ್ನೆಲ್ಲ ಮುಳುಗಿಸಿಬಿಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ 36,000 ಹೆಕ್ಟರ್ ಗದ್ದೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಸಮಪ್ರಮಾಣದಲ್ಲಿ ಮಳೆಯಾದರೆ ಒಳ್ಳೆಯ ಬೆಳೆ ಬರುತ್ತದೆ. ಈ ಬಾರಿ ನಿಗದಿತ ಪ್ರಮಾಣಕ್ಕಿಂತ 21% ಹೆಚ್ಚು ಮಳೆಯಾಗಿದೆ. ರೈತರ ಉಪಯೋಗಕ್ಕೆ ಅಲ್ಲಲ್ಲಿ ಕಟ್ಟಿರುವ ಕಿಂಡಿ ಅಣೆಕಟ್ಟು ರೈತರಿಗೆ ಸಮಸ್ಯೆ ತಂದಿಟ್ಟಿದೆ. ಕಸ ಗಿಡಗಂಟಿ ತುಂಬಿ ನೀರು ಹರಿಯದೆ ಹತ್ತಾರು ಕಡೆ ಬ್ಲಾಕ್ ಆಗಿದೆ.

ಹಿಂದೆ ಕರಾವಳಿಯಲ್ಲಿ ಮೂರು ಬೆಳೆ ಬೆಳೆಯಲಾಗುತ್ತಿತ್ತು : ಪ್ರಸಕ್ತ ಪರಿಸ್ಥಿತಿಯಲ್ಲಿ ರೈತ ಒಂದು ಬೆಳೆ, ಹೆಚ್ಚೆಂದರೆ ಎರಡು ಬೆಳೆ ತೆಗೆಯುತ್ತಾನೆ. ನದಿ ಹೊಳೆ ರಾಜ ಕಾಲುವೆಯಲ್ಲಿ ಭಾರಿ ಹೂಳು ಮತ್ತು ಮರಳು ತುಂಬಿಕೊಂಡಿರುವ ಕಾರಣ ನೀರು ಸರಾಗವಾಗಿ ಹರಿಯದೆ ಗದ್ದೆಗಳಿಗೆ ನುಗ್ಗುತ್ತಿದೆ. ಸರ್ಕಾರಿ ಜಮೀನಿನ ಸುತ್ತಮುತ್ತಲ ಗದ್ದೆಗಳಲ್ಲಿ ಕೃತಕ ನೆರೆ ಕೆಸರು ಮರಳನ್ನು ತಂದೆಸೆದಿದೆ ಎಂದು ರೈತ ಮಹಾಬಲ ತಿಳಿಸಿದ್ದಾರೆ.

ಇದನ್ನೂ ಓದಿ :ಹಾವೇರಿಯಲ್ಲಿ ಧಾರಾಕಾರ ಮಳೆ ; ಬೆಳೆಗಳು ಜಲಾವೃತ, ಕಂಗಾಲಾದ ರೈತರು - Crop damage by Flood water

ABOUT THE AUTHOR

...view details