ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ಎತ್ತುಗಳ ಸಮೇತ ಬೆಳಗಾವಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.
ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಗುಡನಟ್ಟಿ, ಬೀರಹೊಳಿ ಗ್ರಾಮಗಳ ಸಾವಿರಾರು ರೈತರು ಎತ್ತುಗಳ ಸಮೇತ ಬೆಳಗಾವಿ ಸರ್ದಾರ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬಳಿಕ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹಿಡಕಲ್ ಡ್ಯಾಮ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ನೀರಾವರಿ ಇಲಾಖೆ ಕಚೇರಿಗೆ ಎತ್ತುಗಳು ಮತ್ತು ಟ್ರ್ಯಾಕ್ಟರ್ ಸಮೇತ ಆಗಮಿಸಿದ ರೈತರು ಮುತ್ತಿಗೆ ಹಾಕಿದರು.
ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ 396 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ನೀರಾವರಿ ನಿಗಮದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ಎರಡು ವರ್ಷಗಳ ಹಿಂದೆಯೇ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ ಪರಿಹಾರ ನೀಡಲು ಅಧಿಕಾರಿಗಳು ಮೀನಮೇಷ ಎನಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರೈತ ಬಾಳೇಶ ಮಾವನೂರ, "ಎತ್ತುಗಳೊಂದಿಗೆ ಭೂಮಿ ಕಳೆದುಕೊಂಡ ಎಲ್ಲ ರೈತರು ಧರಣಿ ಮಾಡುತ್ತಿದ್ದೇವೆ. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಕೂಡ ಬರಲಿದ್ದಾರೆ. ಒಂದು ತಿಂಗಳಿಗಾಗುವಷ್ಟು ರೇಷನ್, ಎತ್ತುಗಳಿಗೆ ಮೇವು ತಂದಿದ್ದೇವೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗೋದಿಲ್ಲ ಎಂದು ಎಚ್ಚರಿಸಿದರು.