ದಾವಣಗೆರೆ: 'ಕೆಂಪು ಸುಂದರಿ' ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಟೊಮೆಟೊಗೆ ಮಾರುಕಟ್ಟೆಯಲ್ಲಿ ಕಿಮ್ಮತ್ತು ಇಲ್ಲದಂತಾಗಿದೆ. ಬೆಲೆ ಇಳಿಕೆ ಕಂಡಿದ್ದು, ರೈತರನ್ನು ಹೈರಾಣಾಗಿಸಿದೆ.
ಕೆಲ ದಿನಗಳ ಹಿಂದೆ ಟೊಮೆಟೊ ದರ ಏರಿಕೆ ಕಂಡ ಬೆನ್ನಲ್ಲೇ ಮಾಯಕೊಂಡ ಭಾಗದ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಏಕಾಏಕಿ ಟೊಮೆಟೊ ಬೆಲೆ ಪಾತಾಳ ಕಂಡಿದ್ದರಿಂದ ರೈತರನ್ನು ಕಂಗಲಾಗಿಸಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ. ಮಾಯಕೊಂಡ ಸುತ್ತಮುತ್ತಲಿನ ಬಹುತೇಕ ಗ್ರಾಮದ ಜಮೀನುಗಳಲ್ಲಿ ರೈತರು ಬೆಳೆಯುವ ಟೊಮೆಟೊವನ್ನು ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿರುವ ಹೆಗ್ಗಳಿಕೆ ಇದೆ. ದರ ಹೆಚ್ಚಿರುವುದನ್ನು ಮನಗಂಡ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಹೆಚ್ಚಾಗಿ ಟೊಮೆಟೊ ಹಾಕಿದ್ದರು.
ಟೊಮೆಟೊ ಬೆಳೆಗಾರರ ಅಳಲು! (ETV Bharat) 80 - 90 ಸಾವಿರ ಖರ್ಚು ಮಾಡಿ ಟೊಮೆಟೊ ಬೆಳೆದ ರೈತರು:ದಾವಣಗೆರೆ ತಾಲೂಕಿನ ಮಾಯಕೊಂಡ, ಕೊಡಗನೂರು, ಸುಲ್ತಾನಿ ಪುರ, ನೇರ್ಲಿಗೆ, ಹೊನ್ನನಾಯಕನಹಳ್ಳಿ, ಮುಂತಾದ ಗ್ರಾಮದ ಜಮೀನುಗಳಲ್ಲಿ 100 - 200 ಎಕರೆಯಲ್ಲಿ ರೈತರು ಟೊಮೆಟೊ ಬೆಳೆದಿದ್ದಾರೆ. ಬೆಲೆ ಕುಸಿತ ಕಂಡ ಬೆನ್ನಲ್ಲೇ ಟೊಮೆಟೊ ಮಾರುಕಟ್ಟೆಗೆ ಕೊಂಡೊಯ್ಯಲು ಹಿಂದೇಟು ಹಾಕುವಂತಾಗಿದೆ. ಒಂದು ಎಕರೆಗೆ 80 - 90 ಸಾವಿರ ವ್ಯಯ ಮಾಡಿ ರೈತರು ಟೊಮೆಟೊ ಬೆಳೆದಿದ್ದರು. ಇದೀಗ ಬೆಲೆ ಇಲ್ಲದೇ ಇರುವುದು ರೈತರು ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಸಿದ 'ಕೆಂಪು ಸುಂದರಿ'ಯ ಬೆಲೆ (ETV Bharat) ಮಾಡಿದ ಖರ್ಚು ಕೈಗೆ ಸಿಗ್ತಿಲ್ಲ; ಬಾಕ್ಸ್ಗೆ ನೂರಿನ್ನೂರು ಕೇಳುವವರೂ ದಿಕ್ಕಿಲ್ಲ:ಕೊಡಗನೂರು ಗ್ರಾಮದ ರೈತ ಮಹಿಳೆ ರೇಣುಕಮ್ಮ ಹಾಗೂ ರೈತ ಮಂಜಣ್ಣ ಜಮೀನಿನಲ್ಲಿ ಟೊಮೆಟೊ ಹಾಕಿ ಕೈ ಸುಟ್ಟಿಕೊಂಡಿದ್ದಾರೆ. ರೈತ ಮಂಜಣ್ಣ ಅವರು ಈಟಿವಿ ಭಾರತ್ ಗೆ ಪ್ರತಿಕ್ರಿಯಿಸಿ, "ಒಂದು ಬಾಕ್ಸ್ ಟೊಮೆಟೊಗೆ 150-200 ರೂಪಾಯಿ ಆಗಿದೆ. ದರ ಇದೆ ಎಂದು ರೈತರು 200 ಎಕರೆಯಲ್ಲಿ ಟೊಮೆಟೊ ಹಾಕಿದ್ದರು. ಇದೀಗ ಒಂದು ಎಕರೆಗೆ 1 ಲಕ್ಷ ಖರ್ಚು ಬಂದಿದೆ, ದರ ಕಡಿಮೆ ಆಗಿದ್ದರಿಂದ ರೈತನಿಗೆ ಏನೂ ಉಳಿಯುತ್ತಿಲ್ಲ. ಸರ್ಕಾರದಿಂದ ಸಿಗುವ ಸಬ್ಸಿಡಿ ನಿಲ್ಲಿಸಿದ್ದಾರೆ. ಸರ್ಕಾರ ನೀಡುತ್ತಿದ್ದ ಗೊಬ್ಬರ ಬೀಜ ಕೂಡ ನಿಲ್ಲಿಸಿದ್ದಾರೆ. ಹಾಕಿದ ಬಂಡವಾಳ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣ ಆಗಿದೆ" ಎಂದರು.
ಕುಸಿದ 'ಕೆಂಪು ಸುಂದರಿ'ಯ ಬೆಲೆ (ETV Bharat) ಮೊದಲಿನ ದರ ಇಂದಿನ ದರಕ್ಕೆ ಅಜಗಜಾಂತರ ವ್ಯತ್ಯಾಸ: ಇಂದಿನ ದರಕ್ಕೂ ಹಳೇ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ದರ ಹೆಚ್ಚಿದ್ದಾಗ ರೈತರ ಹೆಚ್ಚು ಟೊಮೆಟೊ ಹಾಕಿ, ಫಸಲು ಕೈಗೆ ಬರುವಷ್ಟರಲ್ಲಿ ದರ ಕುಸಿದಿದೆ. ರೈತ ಮಹಿಳೆ ರೇಣುಕಮ್ಮ ಪ್ರತಿಕ್ರಿಯಿಸಿ, "ಎರಡು ಎಕರೆ ಟೊಮೆಟೊ ಹಚ್ಚಿದಾಗ ಬಾಕ್ಸ್ಗೆ 500-600 ದರ ಇತ್ತು, ಇದೀಗ 100-150 ರೂ, ಬಾಕ್ಸ್ ದರ ಆಗಿದೆ. ಒಂದು ಎಕರೆಗೆ 50-60 ಸಾವಿರ ಖರ್ಚು ಮಾಡಿದ್ದೇವೆ. ಇದೀಗ ಬಂದ ಹಣದಿಂದ ದಲ್ಲಾಳಿಗಳಿಗೆ, ಕೂಲಿಗಳಿಗೆ, ಟೊಮೆಟೊ ಮಾರುಕಟ್ಟೆ ಸಾಗಾಟಕ್ಕೆ ಹಣ ಕೊಡುವುದಾಗಿದೆ. ನಮಗೆ ಏನೂ ಲಾಭ ಇಲ್ಲ, ಇಲ್ಲಿ ತನಕ ಒಟ್ಟು 150 ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದೇವೆ. ಆದರೆ ಖರ್ಚು ಮಾಡಿದ್ದ ಹಣ ಕೈ ಸೇರಿಲ್ಲ. ಸಾಲ ಸೋಲ ಮಾಡಿ ಟೊಮೆಟೊ ಬೆಳೆದಿದ್ದೇವೆ. ಪರಿಹಾರ ಬೇಕಾಗಿದೆ".
ಬೆಲೆ ಕುಸಿತದಿಂದ ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದ ರೈತರು ಕಂಗಾಲು! (ETV Bharat) "ಒಂದು ಸಸಿಗೆ 1 ರೂಪಾಯಿ, ಒಂದು ಸಸಿಗೆ ಗೂಟ ನೆಡಲು 100 ರೂಪಾಯಿ, ಗಿಡ ಕಟ್ಟಲು ಹುರಿ, ಟೊಮೆಟೊ ಬಳ್ಳಿ ಕಟ್ಟಲು ಎಕರೆಗೆ 600 ರಿಂದ ಸಾವಿರ ಕೊಡಬೇಕು. ಟೊಮೆಟೊ ಕೊಯ್ಯಲು 300 ರೂಪಾಯಿ, ಬಾಕ್ಸ್ ಹೊರುವವರಿಗೆ 500 ಕೂಲಿ ಕೊಡಬೇಕು, ಸಸಿ, ಗೊಬ್ಬರ, ದುಬಾರಿ ಆಗಿದೆ ನಮಗೆ ಏನ್ ಲಾಭ ಇಲ್ಲ, ರೈತರ ಕಡೆ ಸರ್ಕಾರದ ಗಮನ ನೀಡಲಿ" ಎಂದು ರೈತ ಮಹಿಳೆ ರೇಣುಕಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಬೆಲೆ ನಿಯಂತ್ರಣ ಕ್ರಮ: ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ