ಹಾವೇರಿ :ಜಿಲ್ಲೆಯ ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮದ ಸಾಮಾನ್ಯ ರೈತರಲ್ಲಿ ಒಬ್ಬರು ಶಿವಪ್ಪ ನವಲೆ. ಶಿವಪ್ಪ ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಕಳೆದ ವರ್ಷದಿಂದ ಅವರು ಸಾಂಪ್ರದಾಯಿಕ ಬೆಳೆಗಳಿಗೆ ಪೂರ್ಣ ವಿರಾಮ ನೀಡಿ, ಕಲ್ಲಂಗಡಿ ಬೆಳೆಯತ್ತ ಮುಖ ಮಾಡಿದ್ದಾರೆ.
ಕಳೆದ ವರ್ಷ ಅಧಿಕ ಮಳೆಯಿಂದ ಕಲ್ಲಂಗಡಿ ಅತ್ಯಧಿಕ ಪ್ರಮಾಣದಲ್ಲಿ ಲಭಿಸಿದ್ದರಿಂದ ಉತ್ತಮ ಆದಾಯ ಗಳಿಸಿದ್ದರು. ಹೀಗಾಗಿ ಈ ವರ್ಷವೂ ಸಹ ಕಲ್ಲಂಗಡಿ ಬೆಳೆದಿದ್ದಾರೆ. ಕಪ್ಪು ಕಲ್ಲಂಗಡಿ ಹಣ್ಣು ಬೆಳೆದಿರುವ ಶಿವಪ್ಪ ಅವರಿಗೆ ಇದೀಗ ಬಂಪರ್ ಬೆಳೆ ಬಂದಿದೆ. ಜೊತೆಗೆ ಕಲ್ಲಂಗಡಿ ಕೆಜಿಗೆ 15 ರೂಪಾಯಿ ಮಾರಾಟವಾಗುತ್ತಿರುವುದು ಸ್ವಲ್ಪ ಆದಾಯ ಸಹ ತಂದಿದೆ. ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದ ಶಿವಪ್ಪ ಇದುವರೆಗೆ ಸುಮಾರು 50ಟನ್ ಕಲ್ಲಂಗಡಿ ಮಾರಿದ್ದಾರೆ.
''ಟನ್ ಕಲ್ಲಂಗಡಿಗೆ 15 ಸಾವಿರ ರೂಪಾಯಿ ನೀಡಿ ವರ್ತಕರೇ ಜಮೀನಿಗೆ ಬಂದು ಖರೀದಿ ಮಾಡಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಪ್ರತಿದಿನ ಇಬ್ಬರು ಕೆಲಸ ಮಾಡಿದ್ದಾರೆ. ಕೆಲವೊಮ್ಮೆ ಕೂಲಿಕಾರ್ಮಿಕರ ಸಹಾಯ ಸಹ ಪಡೆದಿದ್ದೇವೆ. ಇದನ್ನೆಲ್ಲಾ ಖರ್ಚು ತೆಗೆದರೆ ನನಗೆ ನಿವ್ವಳ 3 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ'' ಎನ್ನುತ್ತಾರೆ ರೈತ ಶಿವಪ್ಪ.
ಪ್ರಸ್ತುತ ವರ್ಷ ಕಲ್ಲಂಗಡಿ ಹಾಕಿದಾಗ ಹಿಂಗಾರು ಮಳೆ ಕೈಕೊಟ್ಟಿತ್ತು. ನಂತರ ಕೊಳವೆ ಬಾವಿ ಸಹಾಯದಿಂದ ಕಲ್ಲಂಗಡಿ ಬೆಳೆದೆ. ಇನ್ನೇನು ಹಣ್ಣು ಪೂರ್ಣ ಪ್ರಮಾಣದಲ್ಲಿ ಬಿಡುವ ವೇಳೆ ಕೊಳವೆ ಬಾವಿ ಸಹ ಕೈಕೊಟ್ಟಿತು. ಆದರೂ ಸಹ ಛಲ ಬಿಡದೆ ಅಕ್ಕಪಕ್ಕದ ರೈತರಿಂದ ನೀರು ಪಡೆದು ಕಲ್ಲಂಗಡಿ ಬೆಳೆದೆ. ಸರಿಯಾಗಿ ನೀರು ಇದ್ದಿದ್ದರೆ, ಮಳೆಯಾಗಿದ್ದರೆ 4 ಎಕರೆಗೆ ಸುಮಾರು 100 ಟನ್ ಕಲ್ಲಂಗಡಿ ಬರುತ್ತಿತ್ತು ಎಂದಿದ್ದಾರೆ.