ಮೈಸೂರು: ನಾಡಹಬ್ಬ ದಸರಾವನ್ನು ಯಶಸ್ವಿಯಾಗಿ ನಡೆಸಿಕೊಟ್ಟ 14 ಗಜಪಡೆಗೆ ಅರಮನೆ ಆವರಣದಲ್ಲಿ ಇಂದು ಜಿಲ್ಲಾಡಳಿತ ಮತ್ತು ಅರಮನೆ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು.
ದಸರಾ ಆಚರಣೆಗಾಗಿ ಶಿಬಿರಗಳಿಂದ ಗಜಪಯಣದ ಮೂಲಕ ಮೊದಲ ಹಾಗೂ ಎರಡನೇ ಹಂತದಲ್ಲಿ ಅರಮನೆಗೆ ಅಗಮಿಸಿದ್ದ ಗಜಪಡೆಗಳು, ಸುಮಾರು 54 ದಿನಗಳ ಕಾಲ ಅರಮನೆಯ ಆನೆ ಟೆಂಟ್ಗಳಲ್ಲಿ ವಾಸ್ತವ್ಯ ಹೂಡಿದ್ದವು. ಅದ್ಧೂರಿ ದಸರಾ ಅಚರಿಸಿ ಮತ್ತೆ ಅರಮನೆಯಿಂದ ತಮ್ಮ ಮೂಲ ಶಿಬಿರಗಳಿಗೆ ಕಳಿಸಿಕೊಡಲಾಯಿತು.
ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ (ETV Bharat) ಅರಮನೆ ಮುಂಭಾಗದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗೆ ಕಬ್ಬು, ಬೆಲ್ಲ ಹಾಗೂ ವಿವಿಧ ಹಣ್ಣು ಹಂಪಲುಗಳನ್ನು ನೀಡಲಾಯಿತು. ಕಾಡಿನಿಂದ ಅರಮನೆಗೆ ಬಂದು ವಾಸ್ತವ್ಯ ಹೂಡಿದ್ದ ಆನೆ, ಕಾವಾಡಿಗಳು ಹಾಗೂ ಮಾವುತರ ಕುಟುಂಬಸ್ಥರು ಆನೆಗಳ ಜೊತೆಗೆ ತಮ್ಮ ತಮ್ಮ ಲಾರಿಯಲ್ಲಿ ಮೂಲ ಆನೆ ಶಿಬಿರಗಳ ಕಡೆ ಹೊರಟರು. ಜಿಲ್ಲಾಡಳಿತ ಹಾಗೂ ಅರಮನೆ ಅಡಳಿತ ಮಂಡಳಿ ವತಿಯಿಂದ ಮಾವುತರಿಗೆ, ಕಾವಾಡಿಗರನ್ನು ಸನ್ಮಾನಿಸಲಾಯಿತು.
ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ (ETV Bharat) "ದಸರಾವನ್ನು ನಾವು ತುಂಬಾ ಚೆನ್ನಾಗಿ ನಡೆಸಿಕೊಟ್ಟಿದ್ದೇವೆ ಎಂಬ ನಂಬಿಕೆ ಇದೆ. ಡಿಸಿಎಫ್ ಪ್ರಭುಗೌಡ, RFO ಸಂತೋಷ್, ವೈದ್ಯಾಧಿಕಾರಿ ಮುಜೀಬ್ ಮತ್ತು ಅಕ್ರಮ್ ಸೇರಿದಂತೆ ಎಲ್ಲ ಮಾವುತ ಮತ್ತು ಕಾವಾಡಿಗಳು ಬಹಳ ಚೆನ್ನಾಗಿ ಅವರ ಕೆಲಸಗಳನ್ನು ನಿರ್ವಹಿಸಿದ್ದಾರೆ. ಒಟ್ಟು 14 ಆನೆಗಳಲ್ಲಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಅದರಲ್ಲಿ ಕೆಲವು ಆನೆಗಳು ಹೊಸದಾಗಿ ಬಂದಿದ್ದವು. ಆದರೂ ಕೂಡ ಯಾವುದೇ ತೊಂದರೆ ಆಗಲಿಲ್ಲ. ಅಭಿಮನ್ಯು ತನ್ನ ಕೆಲಸವನ್ನು ಲಕ್ಷಾಂತರ ಜನರು ಮೆಚ್ಚುವಂತೆ ಮಾಡಿದ್ದಾನೆ" ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ತಿಳಿಸಿದರು.
ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ (ETV Bharat) "ಅರ್ಜುನ ನಮ್ಮ ಜೊತೆ ಇಲ್ಲ. ಅದರ ಕೆಲಸವನ್ನು ಧನಂಜಯ ಅಚ್ಚುಕಟ್ಟಾಗಿ ಮಾಡಿದ್ದಾನೆ. ಅಭಿಮನ್ಯು ಸಬ್ಟ್ಯೂಟ್ ಆನೆಯಾಗಿ ಗೋಪಿ, ಧನಂಜಯ, ಉಳಿದ ಆನೆಗಳಿಗೂ ಕೂಡ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಿದ್ದೇವೆ. 14 ಆನೆಗಳ ಮಾವುತ ಮತ್ತು ಕಾವಾಡಿಗಳಿಗೆ ನನ್ನ ಅಭಿನಂದನೆಗಳು. ನಮ್ಮ ಜೊತೆಗೆ ದಸರಾ ನಡೆಸಲು ಸಹಕರಿಸಿದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮಾಧ್ಯಮದವರರಿಗೆ ಧನ್ಯವಾದಗಳು. ಮಾವುತರಿಂದ ಕಾವಾಡಿಗಳವರೆಗೆ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಇಂದು ಅರಮನೆ ಆವರಣದಿಂದ ಎಲ್ಲ ಆನೆಗಳನ್ನು ಅವುಗಳ ಕ್ಯಾಂಪ್ಗಳಿಗೆ ಕಳುಹಿಸಿಕೊಡಲಾಗುತ್ತಿದೆ" ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.
ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ (ETV Bharat) ಇದನ್ನೂ ಓದಿ:ಅಂಬಾರಿ ಕೊಡುವುದು ತಡವಾಯಿತು ಎಂಬ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ