ಪುನೀತ್ ರಾಜ್ಕುಮಾರ್ ಅಭಿಮಾನಿ ಕೆ ಮುತ್ತು ಸೆಲ್ವನ್ ಮಾತನಾಡಿದರು (ETV Bharat) ಬೆಳಗಾವಿ :ಕರ್ನಾಟಕ ರತ್ನ ದಿ. ಡಾ. ಪುನೀತ್ರಾಜ್ಕುಮಾರ್ ಅಗಲಿ ಮೂರು ವರ್ಷ ಕಳೆದಿದೆ. ಆದರೂ ಅವರ ಮೇಲಿನ ಅಭಿಮಾನ ಒಂದಿಷ್ಟೂ ಕಡಿಮೆ ಆಗಿಲ್ಲ. ಅದೆಷ್ಟೋ ಮನೆಗಳ ಜಗುಲಿಯಲ್ಲಿ ಅಪ್ಪು ದೇವರೇ ಆಗಿದ್ದಾರೆ. ಇನ್ನು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅಭಿಮಾನಿಯೋರ್ವ ಸೈಕಲ್ ಮೇಲೆ ಐದು ದೇಶಗಳ ಪರ್ಯಟನೆ ಮಾಡುತ್ತಿರೋದು ಎಲ್ಲರ ಗಮನ ಸೆಳೆದಿದೆ.
ಹೌದು, ತಮ್ಮ ಸರಳತೆ, ಅಮೋಘ ಅಭಿನಯ, ಸಮಾಜ ಸೇವೆ ಮೂಲಕ ಕೋಟಿ ಕೋಟಿ ಕನ್ನಡಿಗರ ಹೃದಯಸಿಂಹಾಸನದಲ್ಲಿ "ಅಪ್ಪು" ಶಾಶ್ವತ ಸ್ಥಾನ ಪಡೆದಿದ್ದಾರೆ. ಅಣ್ಣಾವ್ರು ಅಭಿಮಾನಿಗಳೇ ದೇವರು ಎಂದರು. ಆದರೆ, ಅಭಿಮಾನಿಗಳ ಪಾಲಿಗೆ "ಪುನೀತ್" ದೇವರಾಗಿದ್ದಾರೆ.
ಅವರಿಗೆ ಕರ್ನಾಟಕ ಅಷ್ಟೇ ಅಲ್ಲ, ದೇಶದ ವಿವಿಧ ರಾಜ್ಯಗಳು ಸೇರಿ ವಿದೇಶದಲ್ಲೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪಟ್ಟಣದ ಕೆ. ಮುತ್ತು ಸೆಲ್ವನ್ ಎಂಬ 26 ವರ್ಷದ ಅಭಿಮಾನಿ ಅಪ್ಪು ಮೂರ್ತಿ, ಭಾವಚಿತ್ರ ಇಟ್ಟುಕೊಂಡು ಐದು ದೇಶಗಳನ್ನು ಸುತ್ತುತ್ತಿದ್ದು, ಪುನೀತ್ ರಾಜ್ಕುಮಾರ್ ವ್ಯಕ್ತಿತ್ವ, ಸಮಾಜಸೇವೆ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ.
ಅಪ್ಪು ಹೆಸರಲ್ಲಿ 5 ಲಕ್ಷ ಗಿಡ ನೆಡುವ ಗುರಿ; ಇದಷ್ಟೇ ಅಲ್ಲದೇ ತಾವು ಹೋದ ಕಡೆಯಲ್ಲೆಲ್ಲಾ ಅಪ್ಪು ಹೆಸರಲ್ಲಿ ಗಿಡ ನೆಡುತ್ತಿದ್ದು, ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳ ಸಹಯೋಗದಲ್ಲಿ ಈವರೆಗೆ 3 ಲಕ್ಷ 55 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ತಮ್ಮ ಸೈಕಲ್ ಯಾನ ಮುಗಿಯುವ ಹೊತ್ತಿಗೆ 5 ಲಕ್ಷ ಗಿಡ ನೆಡುವ ಗುರಿ ಇಟ್ಟುಕೊಂಡಿದ್ದಾರೆ ಮುತ್ತು ಸೆಲ್ವನ್.
2021ರ ಡಿಸೆಂಬರ್ 21ರಂದು ತಮಿಳುನಾಡಿನಿಂದ ಸೈಕಲ್ ಯಾತ್ರೆ ಆರಂಭಿಸಿರುವ ಮುತ್ತು ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಲಡಾಕ್, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ಸಂಚರಿಸಿ ಈಗ ಕರ್ನಾಟಕಕ್ಕೆ ಬಂದಿದ್ದಾರೆ.
1111 ದಿನ, 34,300 ಕಿ. ಮೀ. ಸಂಚಾರ; ಮುಂದೆ ಕೇರಳ, ಪಾಂಡಿಚೇರಿ, ನೇಪಾಳ, ವಿಯೆಟ್ನಾಂ, ಬಾಂಗ್ಲಾದೇಶ, ಥಾಯ್ಲೆಂಡ್ ಹೋಗಿ, 2025ರ ಜನವರಿ ತಿಂಗಳಲ್ಲಿ ದೆಹಲಿಯ ಇಂಡಿಯಾ ಗೇಟ್ನಲ್ಲಿ ಪ್ರಯಾಣ ಮುಕ್ತಾಯ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಈ ಪರ್ಯಟನೆಯಲ್ಲಿ ಮುತ್ತು ಬರೋಬ್ಬರಿ 1111 ದಿನಗಳು ತೆಗೆದುಕೊಳ್ಳಲಿದ್ದು, ಒಟ್ಟು 34,300 ಕಿ. ಮೀ ಕ್ರಮಿಸಿ, ದೇಶ-ವಿದೇಶಗಳಲ್ಲಿ "ಅಪ್ಪು" ವ್ಯಕ್ತಿತ್ವ ಪರಿಚಯಿಸಲಿದ್ದಾರೆ. ಅಲ್ಲದೇ ಗಿನ್ನಿಸ್ ವಿಶ್ವದಾಖಲೆ ಬರೆಯುವ ಮಹದಾಸೆಯನ್ನು ಮುತ್ತು ಹೊಂದಿದ್ದಾರೆ.
ರಾಷ್ಟ್ರಧ್ವಜ, ಅಪ್ಪು ಮೂರ್ತಿ, ಭಾವಚಿತ್ರ ಮತ್ತು ಬಾವುಟ ಹೊಂದಿರುವ ವಿಶೇಷ ಸೈಕಲ್ ಮೇಲೆ ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಆಗಮಿಸಿದ್ದ ಕೆ. ಮುತ್ತು ಸೆಲ್ವನ್ ಎಲ್ಲರ ಗಮನಸೆಳೆದರು. ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ''2017ರಲ್ಲಿ ನಮ್ಮ ಸ್ನೇಹಿತನ ಪತ್ನಿಗೆ ಆಪರೇಶನ್ ಮಾಡಿಸಲು ಅಪ್ಪು ಸರ್ ತಮ್ಮ ಬಳಿ ಇದ್ದ ಚಿನ್ನದ ಸರವನ್ನೇ ಕೊಟ್ಟಿದ್ದರು. ಅಲ್ಲಿಯೇ ಇದ್ದ ನಾನು ಇದನ್ನು ನೋಡಿ ಸ್ಪೂರ್ತಿ ಪಡೆದು, ಅವತ್ತಿನಿಂದ ಅವರ ಅಭಿಮಾನಿ ಆದೆ. ಅಪ್ಪು ಸರ್ ತೀರಿಕೊಂಡ ಬಳಿಕ ಅವರ ಸಮಾಜಸೇವೆ, ಮಾನವೀಯತೆ ಬಗ್ಗೆ ಎಲ್ಲಾ ಕಡೆ ಪ್ರಚಾರ ಮಾಡುವ ಉದ್ದೇಶದಿಂದ ಪ್ರಪಂಚ ಪರ್ಯಟನೆ ಮಾಡುತ್ತಿದ್ದೇನೆ'' ಎಂದು ತಿಳಿಸಿದರು.
ಪರಿಸರದ ಮಹತ್ವ ಸಾರುತ್ತಿರುವ ಮುತ್ತು; ''ಈವರೆಗೆ 4 ಸೈಕಲ್, 14 ಮಸಲ್ ಟೈರ್, 115 ಟೈರ್ ಬಳಸಿದ್ದೇನೆ. ಇಲ್ಲಿತನಕ ₹6 ಲಕ್ಷ ಖರ್ಚಾಗಿದ್ದು, ಇನ್ನೂ ಎರಡೂವರೆ ಲಕ್ಷ ರೂ. ಖರ್ಚಾಗುತ್ತದೆ. 4 ಬಾರಿ ಅಪಘಾತ ಕೂಡ ಆಗಿದೆ. ಆದರೂ ಪ್ರಯಾಣ ಅರ್ಧಕ್ಕೆ ನಿಲ್ಲಿಸಿಲ್ಲ. ಪುನೀತ್ರಾಜ್ಕುಮಾರ್ ಅವರ ಅಭಿಮಾನಿಗಳು, ಕರ್ನಾಟಕ ಪೊಲೀಸರು ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ.
ಹೋದ ಕಡೆ ಊಟ, ಉಪಹಾರದ ವ್ಯವಸ್ಥೆ ಮಾಡುತ್ತಿದ್ದು, ಅರಣ್ಯ ಇಲಾಖೆಯಿಂದ ಉಚಿತ ಸಸಿಗಳನ್ನು ನೀಡುತ್ತಿದ್ದಾರೆ. ಅವುಗಳನ್ನು ನೆಟ್ಟು ಅಪ್ಪು ಯಶೋಗಾಥೆ ಜೊತೆಗೆ ಪರಿಸರದ ಮಹತ್ವವನ್ನು ಸಾರುತ್ತಿದ್ದೇನೆ. ಜನವರಿ 15ರಂದು ಪುನೀತ್ರಾಜ್ಕುಮಾರ್ ಅವರ ಸಮಾಧಿ ಬಳಿ ಬಾವುಟ ಬಿಚ್ಚಿ, ಅವರ ಹೆಸರಿನಲ್ಲಿ ಬರೆಯುತ್ತಿರುವ ಪುಸ್ತಕ ಬಿಡುಗಡೆ ಮಾಡಿಸಿ ನನ್ನ ಪ್ರಯಾಣ ಮುಕ್ತಾಯಗೊಳಿಸುತ್ತೇನೆ'' ಎಂದು ವಿವರಿಸಿದರು.
ಬೆಳಗಾವಿ ಅಭಿಮಾನಿ ಗಿರಿಜಾ ಕೋಲ್ಹಾರ ಮಾತನಾಡಿ, ''ನಾನು ಕೂಡ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ. ಶಾಲಾ ದಿನಗಳಿಂದಲೂ ಅವರದ್ದು ಬಿಟ್ಟು ಬೇರೆ ಯಾರ ಸಿನಿಮಾಗಳನ್ನು ನೋಡಿಲ್ಲ. ಆದರೆ, ಅಪ್ಪು ಹೆಸರಲ್ಲಿ ದೇಶ, ವಿದೇಶಗಳಿಗೆ ಸೈಕಲ್ ಪ್ರಯಾಣ ಮಾಡುತ್ತಿರುವ ಈ ಅಭಿಮಾನಿ ನೋಡಿ ತುಂಬಾ ಖುಷಿ ಆಯ್ತು. ಇವರಿಗೆ ಎಲ್ಲ ಅಭಿಮಾನಿಗಳು ಸಹಕಾರ ನೀಡಬೇಕು'' ಎಂದು ಕೇಳಿಕೊಂಡರು.
ಇದನ್ನೂ ಓದಿ :ಸ್ವಾತಂತ್ರ್ಯ ಅಮೃತ ಮಹೋತ್ಸವ: ರಾಜ್ಯ ತಲುಪಿದ ಕಾಶ್ಮೀರ ಟು ಕನ್ಯಾಕುಮಾರಿ ಸೈಕಲ್ ಯಾತ್ರೆ ಕೈಗೊಂಡ ಅಧಿಕಾರಿ