ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಗಾಂಧೀಜಿ ಪುತ್ಥಳಿ ಉದ್ಘಾಟನೆಗೆ ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ಆಹ್ವಾನ - CONGRESS SESSION CENTENARY PROGRAM

ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಚಿವ ಹೆಚ್.ಕೆ. ಪಾಟೀಲ ಅವರು ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ತೆರಳಿ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

Etv Bharat
ಸ್ವಾತಂತ್ರ‍್ಯ ಯೋಧರ ಕುಟುಂಬಸ್ಥರಿಗೆ ಆಹ್ವಾನಿಸಿದ ಹೆಚ್.ಕೆ. ಪಾಟೀಲ (Etv Bharat)

By ETV Bharat Karnataka Team

Published : Dec 25, 2024, 7:11 AM IST

ಬೆಳಗಾವಿ:ಬೆಳಗಾವಿಯಲ್ಲಿ ನಡೆಯುತ್ತಿರುವ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಾಚರಣೆ ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿದೆ. ಶತಮಾನೋತ್ಸವದ ಸಮಿತಿಯ ಅಧ್ಯಕ್ಷರೂ ಆದ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ. ಪಾಟೀಲ ಅವರು ಮಂಗಳವಾರ ಸಾಂಕೇತಿಕವಾಗಿ ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ತೆರಳಿ ಸುವರ್ಣಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಲು ಆಹ್ವಾನ ನೀಡಿದರು.

ರಾಮತೀರ್ಥನಗರದಲ್ಲಿ ಇರುವ ಅಣ್ಣು ಗುರೂಜಿ ಅವರ ಮನೆಗೆ, ಹನುಮಾನ ನಗರದಲ್ಲಿರುವ ವಿಠ್ಠಲರಾವ್ ಯಾಳಗಿ ಹಾಗೂ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ರೂವಾರಿ ಗಂಗಾಧರರಾವ್ ದೇಶಪಾಂಡೆ ಅವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿದ ಹೆಚ್.ಕೆ.ಪಾಟೀಲರು ಆಹ್ವಾನ ನೀಡಿದರು.

ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ಹೆಚ್​.ಕೆ.ಪಾಟೀಲ್​ ಭೇಟಿ (ETV Bharat)

''ಅಸ್ಪೃಶ್ಯತೆ ನಿವಾರಣೆಗೆ ಗಾಂಧಿಜಿ ಕರೆ ಕೊಟ್ಟ ಕಾಲಘಟ್ಟದಲ್ಲಿ ಬೆಳಗಾವಿ ಅಧಿವೇಶನ ನಡೆಯತ್ತಿತ್ತು. ನಮ್ಮ ಮನೆತನದವರು ಸ್ವಯಂಪ್ರೇರಿತರಾಗಿ ಭಂಗಿ ಬಳಿಯಲು ಮುಂದಾದರು. ಹೀಗಾಗಿ, ಅವರು ಮುಂಚೂಣಿಯಲ್ಲಿ ಇರಲಿಲ್ಲ. ಇದನ್ನು ಈಗ ಊಹಿಸಿಕೊಳ್ಳವುದೂ ಕಷ್ಟ'' ಎಂದು ಅಣ್ಣು ಗುರೂಜಿ ಅವರ ಮೊಮ್ಮಗ ಮಹೇಶ ದೇಶಪಾಂಡೆ ಅವರು ಹೆಚ್‌‌.ಕೆ.ಪಾಟೀಲರಿಗೆ ವಿವರಿಸಿದರು.

''ನಮ್ಮೂರು ಹಾಗೂ ಸುತ್ತಮುತ್ತಲಿನ ಊರುಗಳ ಜನರು ಗಾಂಧೀಜಿಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು ಎಂದು ನಮ್ಮಜ್ಜ ಹೇಳುತ್ತಿದ್ದರು. ನಾವೆಲ್ಲಾ ಅಜ್ಜನ ನೆರಳಿನಲ್ಲೇ ಬೆಳೆದವರು. ನಮ್ಮಜ್ಜ ತಲಾಠಿ ನೌಕರಿ ಬಿಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ನಾನು ಈ ಎಲ್ಲ ಮಾಹಿತಿ, ದಾಖಲೆ ಸಂಗ್ರಹಿಸಿರುವೆ'' ಎಂದರು.

ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ಹೆಚ್​.ಕೆ.ಪಾಟೀಲ್​ ಭೇಟಿ (ETV Bharat)

''ಇದು ಪುಸ್ತಕ ರೂಪದಲ್ಲಿ ಬರಬೇಕು'' ಎಂದು ಸಚಿವರು ದೇಶಪಾಂಡೆ ಅವರಿಗೆ ಸಲಹೆ ನೀಡಿದರು. ಬೆಳಗಾವಿ ಅಧಿವೇಶನ ಕುರಿತು ಅಣ್ಣು ಗುರೂಜಿ ಬರೆದ ಕಿರು ಪುಸ್ತಕ ಮರು ಮುದ್ರಿಸಲು ಆದೇಶ ನೀಡಿದರು. ''ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹಾಗೂ ಹೋರಾಡಿದ ಯೋಧರನ್ನು ಎಂದಿಗೂ ಮರೆಯಬಾರದು. ನೈಜವಾಗಿ ದುಡಿದವರ ಸೇವೆ ಸ್ಮರಿಸಬೇಕು, ಇದು ನಮ್ಮ ಕರ್ತವ್ಯ'' ಎಂದು ಸಚಿವ ಹೆಚ್.ಕೆ.ಪಾಟೀಲ ಅವರು ಹೇಳಿದರು.

ಲೋಕಮಾನ್ಯ ತಿಲಕರಿಂದ ಸ್ಫೂರ್ತಿ: ''ನಮ್ಮ ಮನೆಯಲ್ಲಿ 16 ಜನ ಜೈಲು ವಾಸ ಅನುಭವಿಸಿದ್ದಾರೆ. 13 ಜನ ಸ್ವಾತಂತ್ರ್ಯಕ್ಕಾಗಿ 3 ಜನ ಗೋವಾ ವಿಮೋಚನೆಗಾಗಿ ಹೋರಾಡಿದ್ದಾರೆ. ಗಾಂಧೀಜಿ ಜೊತೆ ನಮ್ಮ ತಂದೆ ನಿಕಟ ಸಂಪರ್ಕ ಹೊಂದಿದ್ದರು. ಚಿಕ್ಕಪ್ಪ ಬೆಳಗಾವಿಯಲ್ಲಿ ಅಧಿವೇಶನವಾಗಬೇಕೆಂದು ಬಯಸಿದ್ದರು. ಆದರೆ, 1923ರಲ್ಲಿ ಅವರು ತೀರಿಕೊಂಡರು. ಲೋಕಮಾನ್ಯ ತಿಲಕರಿಂದ ಸ್ಫೂರ್ತಿ ಪಡೆದಿದ್ದರು. ಗಾಂಧೀಜಿ ಬೆಳಗಾವಿಗೆ ಭೇಟಿ ಕೊಟ್ಟಾಗಲೆಲ್ಲಾ ನಮ್ಮ ಮನೆತನ ಸೇವೆ ಸಲ್ಲಿಸಿದೆ'' ಎಂದು ವಿಠ್ಹಲರಾವ ಯಾಳಗಿ ಅವರು ಹೆಮ್ಮೆಯಿಂದ ನೆನಪುಗಳನ್ನು ಮೆಲುಕು ಹಾಕಿದರು.

''1942ರಲ್ಲಿ ನಾನು ನಮ್ಮ ತಂದೆ, ನಮ್ಮ ಚಿಕ್ಕಪ್ಪ ಎಲ್ಲರನ್ನೂ ಬಂಧಿಸಿ ಜೈಲಿಗೆ ಹಾಕಿದರು. ಬಾಂಬ್ ತಯಾರಿಸುವುದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದು ಸೇರಿ ಚಾವಡಿ ಸುಡುತ್ತಿದ್ದೆವು, ಇದಕ್ಕಾಗಿ ನಮ್ಮನ್ನು ಜೈಲಿಗೆ ಹಾಕಿದರು'' ಎಂದು ತಿಳಿಸಿದರು.

''1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಲು ಅಂದು ಗಂಗಾಧರಾವ್ ದೇಶಪಾಂಡೆ 72 ಸಾವಿರ ರೂ. ಸಂಗ್ರಹಿಸಿದರು. ಅಧಿವೇಶನಕ್ಕೆ ತಗಲುವ ಖರ್ಚನ್ನು ಭರಿಸಲು ಮುಂದಾದರು. ಹುಬ್ಬಳಿಯಲ್ಲಿ ಜರುಗಿದ ಸಭೆಯಲ್ಲಿ ಈ ವಿಷಯವನ್ನು ಮತಕ್ಕೆ ಹಾಕಿದಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹೆಚ್ಚು ಮತಗಳು ಬಂದವು. ಹೀಗಾಗಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು'' ಎಂದು ಗಂಗಾಧರರಾವ್ ದೇಶಪಾಂಡೆ ಅವರ ಮೊಮ್ಮಗ ರವೀಂದ್ರ ದೇಶಪಾಂಡೆ ಹೇಳಿದರು.

''ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ಸ್ಮರಿಸುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ ಸರ್ಕಾರಕ್ಕೆ ಸ್ವಾತಂತ್ರ್ಯ ಯೋಧರ ಕುಂಟುಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ'' ಎಂದರು.

ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ:ನಂತರ ಸಚಿವ ಎಚ್.ಕೆ.ಪಾಟೀಲರು ಸುವರ್ಣಸೌಧಕ್ಕೆ ತೆರಳಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣ ಸಿದ್ಧತೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತಿತರರು ಇದ್ದರು.

ಇದನ್ನೂ ಓದಿ:1924ರ ಬೆಳಗಾವಿ ಕಾಂಗ್ರೆಸ್​ ಅಧಿವೇಶನಕ್ಕೆ 100 ವಸಂತ: 'ಕೈ'ನಿಂದ ನವ ಸತ್ಯಾಗ್ರಹ ಬೈಠಕ್​

ABOUT THE AUTHOR

...view details