ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿರುವ ಪ್ರಕರಣ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕುಟುಂಬಗಳು ಗ್ರಾಮ ತೊರೆಯುತ್ತಿವೆ. ಇನ್ನು ಇವರ ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಲವಂತವಾಗಿ ಸಾಲ ಕೊಡುತ್ತಿರುವ ಕೆಲ ಮೈಕ್ರೋ ಫೈನಾನ್ಸ್ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಮಾನಸಿಕವಾಗಿ ಹಿಂಸೆ ನೀಡುತ್ತಿವೆ:ಶಿರಮಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಹುಚ್ಚಯ್ಯ ಮಾತನಾಡಿ, "ಇತ್ತೀಚಿಗೆ ಮೈಕ್ರೋ ಫೈನಾನ್ಸ್ಗಳ ಹಾವಳಿ ಹೆಚ್ಚಾಗಿದೆ. ಶಿರಮಳ್ಳಿ ಗ್ರಾಮದಲ್ಲಿ ಕನಿಷ್ಠ 15 ಕುಟುಂಬಗಳು ಗ್ರಾಮ ತೊರೆದಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಕೊಡುವಾಗ ಅವರಿಗೆ ಸಾಲ ತೀರಿಸುವ ಸಾಮರ್ಥ್ಯ ಇದೆಯೇ ಎಂದು ನೋಡದೇ ಮಿತಿಮೀರಿ ಸಾಲ ಕೊಡುತ್ತಿವೆ. ನಂತರ ಸಾಲಗಾರರಿಗೆ ಸಾಲ ತೀರಿಸಲಾಗದೇ ಊರು ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ಗಳು ಸಾಲಗಾರರಿಗೆ ಮಾನಸಿಕವಾಗಿ ತುಂಬಾ ಹಿಂಸೆ ನೀಡುತ್ತಿವೆ. ಕೊನೆಗೆ ಊರು ಬಿಟ್ಟು ಬೇರೆ ಊರಿಗೆ ಕೂಲಿ ಕೆಲಸಕ್ಕೆ ಹೋಗಿವವರನ್ನು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಿ ಅಲ್ಲಿಗೂ ಹೋಗಿ ಕಿರುಕುಳ ಕೊಟ್ಟು, ಅವಮಾನಿಸುತ್ತಿದ್ದಾರೆ. ಹೀಗಾಗಿ ಮೈಕ್ರೋ ಫೈನಾನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಬೇಕು" ಎಂದು ಸರ್ಕಾರಕ್ಕೆ ಮನವಿ ಮಾಡಿದರು.