ಬೆಳಗಾವಿ: ಬೆಳಗಾವಿಯ ಹೆಸ್ಕಾಂ ಕಚೇರಿ ಮೇಲಧಿಕಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸುಳ್ಳು ದೂರು ನೀಡಿದ ಮಹಿಳೆ ಸೇರಿ 13 ಜನರನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಗುರುವಾರಕ್ಕೆ (ಜೂನ್ 27) ಕಾಯ್ದಿರಿಸಲಾಗಿದೆ.
ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೆಸ್ಕಾಂನ ಸಹಾಯಕ ಇಂಜನಿಯರ್ ಬಿ. ವಿ. ಸಿಂಧು (ಸದ್ಯ ಮೈಸೂರಿನಲ್ಲಿ ಕಾರ್ಯನಿರ್ವಹಣೆ), ಸಹಾಯಕ ಮಾರ್ಗದಾಳು ನಾಥಾಜಿ ಪಾಟೀಲ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಜಿತ್ ಪೂಜಾರಿ, ಸಹಾಯಕ ಮಾರ್ಗದಾಳು ಮಲ್ಲಸರ್ಜ ಶಹಪೂರಕರ, ಕಿರಿಯ ಇಂಜನಿಯರ್ ಸುಭಾಷ ಹಲ್ಲೊಳ್ಳಿ, ಮಾರ್ಗದಾಳು ಈರಪ್ಪ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ, ಸ್ಟೇಷನ್ ಅಟೆಂಡರ್ ಗ್ರೇಡ್-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮನ್‌ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ ಹಾಗೂ ನಿವೃತ್ತ ಸಹಾಯಕಿ ದ್ರಾಕ್ಷಾಯಣಿ ನೇಸರಗಿ ಸುಳ್ಳು ಪ್ರಕರಣ ದಾಲಿಸಿರುವ ಕುರಿತು ಆರೋಪ ಸಾಭೀತಾಗಿದೆ. ಈ ಹಿನ್ನೆಲೆ ಶಿಕ್ಷೆ ಪ್ರಮಾಣವನ್ನು ನಾಳೆಗೆ (ಜೂನ್ 27ಕ್ಕೆ) ಕಾಯ್ದಿರಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಲ್. ವಿಜಯಲಕ್ಷ್ಮೀದೇವಿ ಅವರು ಮಹತ್ವದ ತೀರ್ಪು ನೀಡಿದ್ದಾರೆ.
ಪ್ರಕರಣ ಹಿನ್ನೆಲೆ: ಹೆಸ್ಕಾಂನ ಸಹಾಯಕ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ವಿ. ಸಿಂಧು ತನಗೆ ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 2014 ನವೆಂಬರ್ 19ರಂದು ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತುಕಾರಾಮ ಮಜ್ಜಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಈ ಪ್ರಕರದ ತನಿಖೆ ನಡೆಸಿದ ಪೊಲೀಸರಿಗೆ ಇದು ಸುಳ್ಳು ಪ್ರಕರಣ ಎಂಬುದು ಕಂಡಬಂದ ಹಿನ್ನೆಲೆ ನ್ಯಾಯಾಲಯಕ್ಕೆ "ಬಿ" ರಿಪೊರ್ಟ ಸಲ್ಲಿಕೆ ಮಾಡಿದ್ದರು. ಬಳಿಕ ತುಕಾರಾಮ ಮಜ್ಜಗಿ ಅವರು ದೂರನ್ನು ಹಿಂಪಡೆಯುವಂತೆ ಫೋನ್ ಮೂಲಕ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಂದು ದೂರನ್ನು 2015ರಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಅಲ್ಲದೇ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇದಕ್ಕೆ ಮಜ್ಜಗಿ ಅವರೇ ಕಾರಣ ಎಂದು ಇನ್ನೊಂದು ದೂರನ್ನು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲೇ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು "ಬಿ" ರಿಪೋರ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ನ್ಯಾಯಾಲಯ ಈ ವರದಿಯನ್ನು ಅಂಗೀಕರಿಸಿದೆ. ತನಿಖೆ ಸಮಯದಲ್ಲಿ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬಳಿಕ ಸೇವೆಯಿಂದ ಅಮಾನತು ಮಾಡಲಾಗಿತ್ತು.