ಬೆಂಗಳೂರು :ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಕುರಿತು ಎಚ್ಎಎಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸ್ಫೋಟ ಸಂಭವಿಸಿರುವ ರಾಮೇಶ್ವರಂ ಕೆಫೆಯ ಫ್ಲೋರ್ ಸೂಪರ್ವೈಸರ್ ಕೆ.ವಿ. ರಾಜೇಶ್ ನೀಡಿರುವ ದೂರಿನನ್ವಯ ಎಚ್ಎಎಲ್ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 120B (ಕ್ರಿಮಿನಲ್ ಒಳಸಂಚಿನಿಂದ ಅಪರಾಧ ಕೃತ್ಯ), 324 (ಮಾರಣಾಂತಿಕ ಆಯುಧದಿಂದ ಗಾಯಗೊಳಿಸುವಿಕೆ), 307 (ಹತ್ಯೆ ಯತ್ನ), ಸ್ಫೋಟಕಗಳ ಕಾಯ್ದೆ ಹಾಗೂ UAPA (ಕಾನೂನುಬಾಹಿರ ಚಟುವಟಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿರುವ ಅಂಶವೇನು? : ಹೋಟೆಲ್ ಪ್ರತಿದಿನ ಬೆಳಗ್ಗೆ 6.00 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿ 1.00 ಗಂಟೆಯವರೆಗೂ ತೆರೆದಿರುತ್ತದೆ. 'ರಾಮೇಶ್ವರಂ ಕೆಫೆ' ಹೋಟೆಲ್ ಬೆಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿದ್ದು, ಪ್ರತಿದಿನ ಸಾವಿರಾರು ಗ್ರಾಹಕರು ಬಂದು ಹೋಗುತ್ತಾರೆ. ಮಧ್ಯಾಹ್ನ 12 ರಿಂದ 3ರ ವರೆಗೆ ಹೆಚ್ಚಿನ ಗ್ರಾಹಕರಿರುತ್ತಾರೆ. ಮಾರ್ಚ್ 1ರಂದು ಬೆಳಗ್ಗೆ ಹೋಟೆಲ್ ಪ್ರಾರಂಭವಾಗಿದ್ದು, ಮಧ್ಯಾಹ್ನ 12:50 ರಿಂದ 1 ಗಂಟೆ ಸುಮಾರಿಗೆ ಗ್ರಾಹಕರು ಕುಳಿತುಕೊಳ್ಳುವ ಜಾಗದಲ್ಲಿರುವ ಹೋಟೆಲ್‌ನ ವಾಶ್ ಬೇಸಿನ್ ಸಮೀಪದಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿದ್ದ ಗ್ರಾಹಕರು ಕುಸಿದು ಬಿದ್ದರು. ಹೋಟೆಲ್‌ನಲ್ಲಿದ್ದ ಗ್ರಾಹಕರು ಸ್ಫೋಟದ ಸುದ್ದಿಗೆ ಭಯಭೀತಗೊಂಡು ಓಡಲು ಪ್ರಾರಂಭಿಸಿದರು.
ಸ್ಫೋಟದ ರಭಸಕ್ಕೆ, ಹೋಟೆಲ್ ಹೊರಗೆ ಜಗುಲಿಗೆ ಹೊಂದಿಕೊಂಡಂತೆ ಹೊರಗಿನ ಜಾಗಕ್ಕೆ ಹಾಕಿದ್ದ ಟಾರ್ಪಲಿನ್ ಶೆಲ್ಮರ್ ಚಿದ್ರಗೊಂಡು, ಹೋಟೆಲ್ ಕಬ್ಬಿಣದ ಚಾವಣೆ ಜಖಂಗೊಂಡಿದೆ. ಗೋಡೆಗೆ ಆಳವಡಿಸಿದ ಗ್ಲಾಸುಗಳು ಪುಡಿಪುಡಿಯಾಗಿವೆ. ಆಗ ಫ್ಲೋರ್ ಮ್ಯಾನೇಜರ್ ಭಯಭೀತರಾಗಿ ಗಾಬರಿಯಿಂದ ಸ್ಫೋಟವಾದ ಸ್ಥಳದ ಸಮೀಪ ಹೋದಾಗ, ಅದೇ ಸಮಯಕ್ಕೆ ಹೋಟೆಲ್ ಕೆಲಸಗಾರರಾದ ಬಾಷಾ, ರಾಜೇಶ್, ಬಸವರಾಜು, ಅಮಿತ್, ನವೀನ್, ಬಸವಣ್ಣ, ಹರಿಹರನ್, ಶಿವ, ಜಿಯಾ, ಕಪಿಲ್ ಇನ್ನು ಮುಂತಾದವರು ಗಾಬರಿಯಿಂದ ಸ್ಫೋಟವಾದ ಸ್ಥಳಕ್ಕೆ ಬಂದರು.
ಸ್ಥಳದಲ್ಲಿ ಹೋಟೆಲ್‌ನ ಸಿಬ್ಬಂದಿಯಾದ ಫಾರೂಕ್ ಹುಸೇನ್ ಸೇರಿದಂತೆ ಐದಾರು ಜನ ಗ್ರಾಹಕರಿಗೆ ಗಾಯಗಳಾಗಿ ರಕ್ತ ಸುರಿಯುತ್ತಿದ್ದು, ಕೂಡಲೇ ಹೋಟೆಲ್ ಸಿಬ್ಬಂದಿ ಹಾಗೂ ಕೆಲ ಗ್ರಾಹಕರು ಗಾಯಾಳುಗಳನ್ನು ಪಕ್ಕಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆನಂತರ ದೂರುದಾರರಾದ ರಾಜೇಶ್ ಅವರು ಸೂಕ್ಷ್ಮವಾಗಿ ಸ್ಥಳವನ್ನು ಪರಿಶೀಲಿಸಿದಾಗ 'ಜಗಲಿಯ ಕಬ್ಬಿಣದ ಹಿಲರ್ಗೆ ಹಾಕಿದ ಟೈಲ್ಸ್ ಗಳೆಲ್ಲವೂ ಕಿತ್ತು ಬಂದಿದ್ದು, ಸ್ಥಳದಲ್ಲಿ ಕಬ್ಬಿಣದ ಬೋಲ್ಟ್ ನಟ್ಸ್, ವಾಶರ್ಸ್ ಬಿದ್ದಿರುವುದು ಹಾಗೂ ಟೈಲ್ಸ್ ಮೇಲೆ ಸ್ಫೋಟವಾಗಿರುವ ಕಲೆಗಳು ಇದ್ದು ಹೋಟೆಲ್ ಭಾವಣಿ ಸೇರಿದಂತೆ ಹಲವಾರು ಸ್ಥಳಗಳು ಸ್ಫೋಟದ ತೀವ್ರತೆಗೆ ಜಖಂ ಆಗಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.