ಕರ್ನಾಟಕ

karnataka

ETV Bharat / state

ಮಂಡ್ಯ ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್ ಆಪರೇಷನ್; ಮರಿತಿಬ್ಬೇಗೌಡ, ಅಪ್ಪಾಜಿಗೌಡ ಕಾಂಗ್ರೆಸ್ ಸೇರ್ಪಡೆ - JDS leaders joined Congress

ಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್​ನ ಕೆಲವು ಮುಖಂಡರು ಇಂದು ಕಾಂಗ್ರೆಸ್​ ಪಕ್ಷ ಸೇರಿಕೊಂಡರು.

ಮರಿತಿಬ್ಬೇಗೌಡ, ಅಪ್ಪಾಜಿಗೌಡ ಕಾಂಗ್ರೆಸ್ ಸೇರ್ಪಡೆ
ಮರಿತಿಬ್ಬೇಗೌಡ, ಅಪ್ಪಾಜಿಗೌಡ ಕಾಂಗ್ರೆಸ್ ಸೇರ್ಪಡೆ

By ETV Bharat Karnataka Team

Published : Mar 22, 2024, 5:03 PM IST

ಬೆಂಗಳೂರು:ಜೆಡಿಎಸ್ ಮಾಜಿ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿ ಹಲವು ಮಂಡ್ಯ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಆ ಮೂಲಕ ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧೆ ಸಾಧ್ಯತೆ ಬೆನ್ನಲ್ಲೇ ಕಾಂಗ್ರೆಸ್ ಆಪರೇಷನ್ ನಡೆಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಯೋಗೇಶ್, ಮಂಜುನಾಥ್ ಗೌಡ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಶಾ ಸುರೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಬಿಕೆ ಹರಿಪ್ರಸಾದ್, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ (ಸ್ಟಾರ್ ಚಂದ್ರು), ಶಾಸಕರಾದ ಉದಯ್, ರವಿ ಗಣಿಗ, ಎಂಎಲ್ಸಿ ದಿನೇಶ್ ಗೂಳಿಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ರಾಜಕೀಯ ಗೊಂದಲ ನೋಡಿ, ಜನತಾದಳ ಗೊಂದಲದ ಗೂಡಾಗಿದೆ. ಅದಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲೇಬೇಕು ಎಂಬ ಸಂಕಲ್ಪ ತೊಟ್ಟು ಕಾಂಗ್ರೆಸ್ ಸೇರಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಮರಿತಿಬ್ಬೇಗೌಡ, ಜಾತ್ಯತೀತ ತತ್ವಗಳನ್ನು ಜೆಡಿಎಸ್ ಗಾಳಿಗೆ ತೂರಿದ ಕಾರಣ ನನ್ನ ಕ್ಷೇತ್ರದ ಶಿಕ್ಷಕರ ಅಭಿಪ್ರಾಯ ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ತೀರ್ಮಾನ ಮಾಡಿದ್ದಾರೆ. ಜೆಡಿಎಸ್​​ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕಾರ್ಯಕರ್ತರ, ಮುಖಂಡರ ಅಭಿಪ್ರಾಯಗಳಿಗೆ ಬೆಲೆ ಇಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ರೈತರ ಹೆಸರು ಹೇಳಿಕೊಂಡು ಜನತಾದಳ ಕೇವಲ ರಾಜಕಾರಣ ಮಾಡಿದೆ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಶೂನ್ಯ. ಚೆಲುವರಾಯಸ್ವಾಮಿ ಅವರು ಆರೋಗ್ಯ ಸಚಿವರಾಗಿದ್ದಾಗ ಮೆಡಿಕಲ್ ಕಾಲೇಜು ತಂದರು ಎಂದರು.

ಜನತಾದಳದವರು ನನಗೆ ಟಿಕೆಟ್ ಮಾತ್ರ ನೀಡಿದರು. ಆದರೆ, ಬೆಂಬಲ ಮಾತ್ರ ನೀಡಲಿಲ್ಲ. ಕೇವಲ ಕುಟುಂಬದ ಪರವಾಗಿ ಮಾತ್ರ ಪಕ್ಷದ ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ನಾನು ಅನೇಕ ಬಾರಿ ಇದರ ವಿರುದ್ಧ ದನಿ ಎತ್ತಿದ್ದೇನೆ. ರೈತ ವಿರೋಧಿ ಕಾಯ್ದೆಗಳನ್ನು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದಾಗ ನಾನು ವಿರೋಧ ವ್ಯಕ್ತಪಡಿಸಿದ್ದೆ. ಕಳೆದ 4 ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದೆ. ಮೊದಲನೇ ಬಾರಿಗೆ ಡಿಕೆ ಶಿವಕುಮಾರ್ ಅವರ ಆಶೀರ್ವಾದದಿಂದ ಟಿಕೆಟ್ ದೊರೆಯಿತು. 1985 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನತಾದಳಕ್ಕೆ ಸೇರಿದ್ದೆ. ಇಂದು ಜಾತ್ಯತೀತ ತತ್ವಗಳಿಗೆ ಧಕ್ಕೆ ಆಗಿರುವ ಕಾರಣ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದೇವೆ ಎಂದರು.

ಇದನ್ನೂ ಓದಿ:ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಈಗಲೂ 50 ಕೋಟಿ ರೂ.‌ ಆಫರ್ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ ಆರೋಪ - OPERATION KAMALA

ABOUT THE AUTHOR

...view details