ಮೈಸೂರು: ತಾಯಿ ಪ್ರಮೋದಾದೇವಿ ಒಡೆಯರ್ ಆಶೀರ್ವಾದದಿಂದಲೇ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಯದುವೀರ್ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ನಿಮಗೆ ರಾಜಕೀಯದ ಮೇಲೆ ಆಸಕ್ತಿ ಬಂದಿದ್ದು ಹೇಗೆ?: ರಾಜಕೀಯಕ್ಕೆ ಬರಲು ಮೊದಲು ಆಸಕ್ತಿ ಇರಲಿಲ್ಲ. ಆದರೆ ಕಳೆದೊಂದು ವರ್ಷದಿಂದ ಆಸಕ್ತಿ ಹೆಚ್ಚಾಯಿತು. ನೀತಿ, ನಿಯಮದ ಮೂಲಕ ಕೆಲಸ ಮಾಡಬೇಕು ಎಂದರೆ ರಾಜಕೀಯದಿಂದ ಮಾತ್ರ ಸಾಧ್ಯವಿದೆ.
ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?: ಕ್ಷೇತ್ರದ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೊಡಗು, ಪಿರಿಯಾಪಟ್ಟಣ, ಹುಣಸೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರು ನಗರದ ಭಾಗದಲ್ಲಿ ನಾವು ಇದ್ದೇ ಇದ್ದೀವಿ. ಎಲ್ಲೆಡೆ ಉತ್ಸಾಹದಿಂದ ಜನ ಭಾಗವಹಿಸುತ್ತಿದ್ದಾರೆ.
ಇದೇ ವೇಳೆ ರಾಜಪರಂಪರೆಯ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಮತ್ತು ಸಂವಿಧಾನದ ಮುಂದೆ ಏನೂ ದೊಡ್ಡದಲ್ಲ. ಹಿಂದೆ ನಮ್ಮ ತಾತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಂಬಲ ಕೊಟ್ಟಿದ್ದಾರೆ. ಇವತ್ತು ಆ ವ್ಯವಸ್ಥೆಯಲ್ಲೇ ನಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ.
ನಿಮ್ಮ ಆದ್ಯತೆ ಏನು?:ಯುವಕರಿಗೆ ಹೆಚ್ಚು ಉದ್ಯೋಗ ಕೊಡುವುದು ಬಹಳ ಮುಖ್ಯ. ಮೈಸೂರಿನಲ್ಲಿ ಹಲವು ವಿದ್ಯಾಸಂಸ್ಥೆಗಳಿವೆ. ಆದರೆ ಇಲ್ಲಿ ಐಟಿ, ಕೈಗಾರಿಕೆಗಳು ಇಲ್ಲ. ಅದ್ದರಿಂದ ಯುವಕರು ಬೆಂಗಳೂರು ಹಾಗೂ ಇನ್ನಿತರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿಸಲು ಜಿಲ್ಲೆಗೆ ಕೈಗಾರಿಕೆ ತರುವುದು, ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸ ಮಾಡಬೇಕಿದೆ. ಅದರ ಜತೆಗೆ ಸ್ಟ್ಯಾಂಡ್ ಅಪ್ ಇಂಡಿಯಾದ ಮೂಲಕ ಉದ್ಯೋಗ ಸೃಷ್ಟಿಕರ್ತರನ್ನು ಸೃಷ್ಟಿಸಬೇಕು. ಬರೀ ಉದ್ಯೋಗ ಆಕಾಂಕ್ಷಿಗಳಾಗಬಾರದು. ಸ್ವಾವಲಂಬಿಯಾಗಿ ಬದುಕಬೇಕೆಂದರೆ ಉದ್ಯೋಗ ಸೃಷ್ಟಿಕರ್ತರಾಗಬೇಕು. ಇದು ಪ್ರಧಾನ ಮಂತ್ರಿಯವರ ಆಶಯ. ಅದಕ್ಕೆ ನಾವು ಸೇತುವೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎರಡೂ ಜಿಲ್ಲೆಗಳ ಪ್ರಕೃತಿಯನ್ನು ಕಾಳಜಿಯಲ್ಲಿಟ್ಟುಕೊಂಡು ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ.