ಬೆಳಗಾವಿ: ''ಡಿ.9ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದ ವಸತಿ, ಊಟ, ಸಾರಿಗೆ, ಶಿಷ್ಟಾಚಾರ ಸೇರಿ 10 ಸಮಿತಿ ರಚಿಸಿದ್ದೇವೆ. ಹಿರಿಯ ಅಧಿಕಾರಿಗಳನ್ನು ಈ ಸಮಿತಿಗಳ ಚೇರ್ಮನ್ ಮಾಡಿದ್ದು, ಅಧಿವೇಶನ ಯಶಸ್ವಿಯಾಗಿ ಜರುಗಲಿದೆ. ಸಾರ್ವಜನಿಕರು ಕೂಡ ನಮ್ಮ ಜೊತೆ ಕೈ ಜೋಡಿಸಬೇಕು'' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು.
ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ''ಅಧಿವೇಶನವು ಅಚ್ಚಕಟ್ಟಾಗಿ ನಡೆಯಬೇಕು. ಶಾಸಕರು, ಸಚಿವರು ಸೇರಿ ಯಾರಿಗೂ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚಿಸಿದ್ದಾರೆ. ಹಾಗಾಗಿ, ನಮ್ಮ ಅಧಿಕಾರಿ ವರ್ಗ ಹಗಲಿರುಳು ಶ್ರಮಿಸುತ್ತಿದ್ದು, ಅಧಿವೇಶನ ಯಶಸ್ವಿಯಾಗಿ ನಡೆಯಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
2756 ಕೊಠಡಿ:''ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಪತ್ರಕರ್ತರಿಗಾಗಿ 2,756 ಕೊಠಡಿ ಕಾಯ್ದಿರಿಸಿದ್ದೇವೆ. ಇದಕ್ಕಾಗಿ ಪ್ರವಾಸಿ ಮಂದಿರಗಳು, ಖಾಸಗಿ ಹೋಟೆಲ್‌ಗಳು, ಕೆಎಲ್ಇ, ವಿಟಿಯು ಸೇರಿ ವಿವಿಧ ಸಂಸ್ಥೆಗಳ ಅತಿಥಿ ಗೃಹಗಳನ್ನು ಬಳಸಿಕೊಳ್ಳುತ್ತಿದ್ದೇವೆ'' ಎಂದು ಮೊಹಮ್ಮದ್ ರೋಷನ್ ತಿಳಿಸಿದರು.
ಶತಮಾನೋತ್ಸವಕ್ಕೆ ಗಾಂಧಿ ಪ್ರತಿಮೆ ಉದ್ಘಾಟನೆ:''ಲೋಕೋಪಯೋಗಿ ಇಲಾಖೆಯಿಂದ 4.5 ಕೋಟಿ ರೂ. ಅನುದಾನದಲ್ಲಿ 25 ಅಡಿ ಎತ್ತರದ ಮಹಾತ್ಮಾ ಗಾಂಧೀಜಿ ಪ್ರತಿಮೆ ತಯಾರಾಗಿದೆ. ಸೌಧದ ಉತ್ತರ ಭಾಗದಲ್ಲಿ ಪ್ರತಿಷ್ಠಾಪನೆ ಆಗಲಿರುವ ಈ ಮೂರ್ತಿಯನ್ನು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಡಿ.26 ಅಥವಾ 27ರಂದು ಲೋಕಾರ್ಪಣೆ ಆಗಲಿದೆ'' ಎಂದು ತಿಳಿಸಿದರು.
ಸೌಧದ ಪಶ್ಚಿಮ ಭಾಗದಲ್ಲಿ ಉದ್ಯಾನ:''ಸುವರ್ಣಸೌಧದ ಪಶ್ಚಿಮ ಭಾಗದಲ್ಲಿ ಗಾರ್ಡನ್ ಕಾರ್ಯ ನಡೆಯುತ್ತಿದೆ. ವಾಟರ್ ಫಾಲ್, ಲಾನ್ ಕೆಲಸ ಆಗುತ್ತಿದೆ. ಅದೇ ರೀತಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗಳ ಸುತ್ತಲೂ ಗಾರ್ಡನ್ ಮಾಡಲಾಗುತ್ತಿದೆ. ಅದೇ ರೀತಿ ಮಕ್ಕಳ ಅನುಕೂಲಕ್ಕಾಗಿ ಒಂದು ವಿಜ್ಞಾನ ಕೇಂದ್ರ ನಿರ್ಮಿಸಲಾಗುತ್ತಿದೆ. ಶತಮಾನೋತ್ಸವ ಅಂಗವಾಗಿ ಗಾಂಧಿ ಅವರ ಜೀವನಗಾಥೆ ಸಾರುವ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಶಾಲಾ ಮಕ್ಕಳಿಗೆ ಆಡಿಟೋರಿಯಂನಲ್ಲಿ ಚರ್ಚಾಕೂಟ, ಭಾಷಣ, ಕಿರುಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ'' ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇದನ್ನೂ ಓದಿ:ಚಳಿಗಾಲದ ಅಧಿವೇಶನ: ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ವಿಮಾನ ಸೇವೆ