ಬೆಂಗಳೂರು/ಬೆಳಗಾವಿ:ಕಾಡಾನೆಗಳು ಹಿಂಡು ಹಿಂಡಾಗಿ ಜನವಸತಿ ಪ್ರದೇಶಗಳಿಗೆ ಬಂದು ರೈತರ ಬೆಳಗಳನ್ನು ನಾಶ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಯಲು ಆನೆ ಕಾರ್ಯ ಪಡೆ, ಕ್ಷಿಪ್ರ ಸ್ಪಂದನ ತಂಡ ಮತ್ತು ಹಿಮ್ಮೆಟಿಸುವ ಶಿಬಿರ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ಶಾಸಕರುಗಳ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸುತ್ತಾ "ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಯಲು ಪ್ರತಿ ಜಿಲ್ಲೆಗೆ ಒಂದರಂತೆ ಅಧಿಕಾರಿ ಹಾಗೂ ಸಿಬ್ಬಂದಿನ್ನೊಳಗೊಂಡ 8 ಆನೆ ಕಾರ್ಯಪಡೆ ರಚಿಸಲಾಗಿದೆ. ಇತರೆ ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ತಲಾ 4 ಜನರ ತಂಡದಂತೆ 95 ಹಿಮ್ಮೆಟ್ಟಿಸುವ ತಂಡ ಹಾಗೂ 33 ಕ್ಷಿಪ್ರ ಸ್ಪಂದನೆ ತಂಡಗಳು ರಚಿಸಲಾಗಿದೆ. ಈ ತಂಡಗಳು ರಾತ್ರಿ ಗಸ್ತು ಕಾರ್ಯಕೈಗೊಂಡು ನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸಿ, ಆನೆಗಳ ಚಲನ - ವಲನಗಳ ಮಾಹಿತಿಯನ್ನು ನೀಡಿ, ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಹೆಜ್ಜೆ ಎಂಬ ಡ್ಯಾಶ್ ಬೋರ್ಡ್ :"ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನವಲನಗಳನ್ನು ಗಮನಿಸಲು 'ಹೆಜ್ಜೆ' ಎಂಬ ಡ್ಯಾಶ್ ಬೋರ್ಡ್ನ್ನು ಅರಣ್ಯ ಇಲಾಖೆ ರೂಪಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳು ಎಚ್ಚರಿಕೆ ಹಾಗೂ ಮಾಹಿತಿ ನೀಡಲು ಅಡ್ವಾನ್ಸ್ ಅಲರ್ಟ್ ಸಿಸ್ಟಂ ರಚಿಸಲಾಗಿದೆ. ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳನ್ನು ಹಾಗೂ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಆಕಾಶವಾಣಿ ಮುಖಾಂತರ ಹಾಗೂ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಸಂದೇಶಗಳನ್ನು ರವಾನಿಸಲಾಗುತ್ತಿದೆ" ಎಂದು ಸಚಿವ ಈಶ್ವರ .ಬಿ. ಖಂಡ್ರೆ ಮಾಹಿತಿ ನೀಡಿದರು.
"ಕಾಡಾನೆ ದಾಳಿ ಸೇರಿದಂತೆ ಯಾವುದೇ ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಈ ಹಿಂದೆ ಸರ್ಕಾರ ನೀಡುತ್ತಿದ್ದ ಪರಿಹಾರ ಧನವನ್ನು ರೂ.7.5 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದೆ. ಇದರೊಂದಿಗೆ ಮೃತಪಟ್ಟ ಹಾಗೂ ಶಾಶ್ವತ ಅಂಗವಿಕಲತೆ ಹೊಂದಿದ ಕುಟುಂಬದವರಿಗೆ 5 ವರ್ಷಗಳವರೆಗೆ ಪ್ರತಿಗಳು ರೂ. 4 ಸಾವಿರ ಮಾಸಾಶನ ನೀಡಲಾಗುವುದು. ಶಾಶ್ವತ ಅಂಗವಿಕಲತೆ ಉಂಟಾದರೆ ರೂ.10 ಲಕ್ಷ, ಭಾಗಶಃ ಅಂಗವಿಕಲತೆಗೆ ರೂ.5 ಲಕ್ಷ, ಗಾಯಗೊಂಡರೆ ರೂ.60 ಸಾವಿರ, ಆಸ್ತಿ ನಷ್ಟಕ್ಕೆ ರೂ.20 ಸಾವಿರ ಪರಿಹಾರ ಧನ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಬೆಳೆಹಾನಿಯಾದರೆ ನಿಯಾಮನುಸಾರ ಪರಿಹಾರ ವಿತರಿಸಲಾಗುವುದು" ಎಂದು ಹೇಳಿದರು.
"ಬೇಲೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ 4 ಜನರು ಬಲಿಯಾಗಿದ್ದು, ಸರ್ಕಾರದ ಆದೇಶದಂತೆ 2021-22ನೇ ಸಾಲಿನ ಪ್ರಕರಣಗಳಿಗೆ ರೂ.7.5 ಲಕ್ಷ ಹಾಗೂ 2023-24ನೇ ಸಾಲಿನ ಪ್ರಕರಣಗಳಿಗೆ ರೂ.15 ಲಕ್ಷದಂತೆ ಒಟ್ಟು ರೂ.45 ಲಕ್ಷ ಪರಿಹಾರ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ಘಟಿಸಿದ 1,468 ಬೆಳೆ ಹಾನಿ ಪ್ರಕರಣದಲ್ಲಿ ಒಟ್ಟು ರೂ.2.10 ಕೋಟಿ ಪರಿಹಾರ ನೀಡಲಾಗಿದೆ" ಎಂದು ಶಾಸಕ ಸುರೇಶ್ ಹೆಚ್.ಕೆ. ಅವರ ಚುಕ್ಕೆ ಗುರುತಿನ ಪ್ರಶ್ನೆ 1,098ಕ್ಕೆ ಸಚಿವರು ಸದನದಲ್ಲಿ ಸಚಿವ ಈಶ್ವರ ಖಂಡ್ರೆ ಉತ್ತರಿಸಿದರು.