ಬೆಂಗಳೂರು: ವಂಚಿತರು, ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗ ಸೇರಿದಂತೆ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಸಿದ ಅವರು, ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಬಜೆಟ್ನಲ್ಲಿ ಸ್ಪಷ್ಟ ಮುನ್ನೋಟ ನೀಡಿದೆ. ಬಜೆಟ್ ಮುಖಪುಟದಲ್ಲಿ ಸಂವಿಧಾನದ ಪೀಠಿಕೆಯನ್ನು ಮುದ್ರಿಸಿದ್ದು, ನಮ್ಮ ಸರ್ಕಾರಕ್ಕೆ ಸಂವಿಧಾನವೇ ಪರಮೋಚ್ಛ ಎಂಬುದನ್ನೂ ನಿರೂಪಿಸಲಾಗಿದೆ. ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್ಪ್ರಿಟೇಷನ್ ಕೇಂದ್ರ ನಿರ್ಮಿಸಲು 25 ಕೋಟಿ ರೂ. ನೀಡಿದ್ದು, ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಪ್ರಕಟಿಸಿರುವುದು ಪರಿಸರ ಪ್ರವಾಸೋದ್ಯಮಕ್ಕೆ ಇಂಬು ನೀಡುತ್ತದೆ ಎಂದರು.
ಆನೆ ಮತ್ತು ಚಿರತೆ ಕಾರ್ಯಪಡೆಗಳ ಉನ್ನತೀಕರಣ:ಈಗಾಗಲೇ ರಚಿಸಲಾಗಿರುವ 7 ಆನೆ ಕಾರ್ಯಪಡೆ ಮತ್ತು 2 ಚಿರತೆ ಕಾರ್ಯಪಡೆ ಕಾರ್ಯಕ್ಷಮತೆ ಹೆಚ್ಚಿಸಲು 40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಕೂಡ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಮುಖ್ಯತೆ ನೀಡುವುದಾಗಿ ಪ್ರಕಟಿಸಿರುವುದು ಮಾನವ ವನ್ಯಜೀವಿ ಸಂಘರ್ಷದ ತ್ವರಿತ ಸ್ಪಂದನೆಗೆ ಸಹಕಾರಿಯಾಗಲಿದೆ. ಬೀದರ್ ಜಿಲ್ಲೆ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರ ಜೀವ ವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರೂ.ಅನುದಾನ ಒದಗಿಸಿರುವುದನ್ನು ಸ್ವಾಗತಾರ್ಹ ಎಂದರು
ಸುಗಮ ವ್ಯಾಪಾರಕ್ಕೆ ಒತ್ತು:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮ್ಮತಿ ಪತ್ರಗಳನ್ನು ಒಗ್ಗೂಡಿಸಿ ಸರಳೀಕರಣಗೊಳಿಸುವ ಮೂಲಕ ಸುಗಮ ವ್ಯಾಪಾರಕ್ಕೆ ಒತ್ತು ನೀಡಲಾಗಿದ್ದು, ಮಂಡಳಿಯ ಕಾರ್ಯಕ್ಷಮತೆ ಹೆಚ್ಚಿಸಲು ಅನುಮತಿ ಮತ್ತು ಪ್ರಮಾಣಪತ್ರಗಳ ನೀಡಿಕೆಗೆ ಏಕ ಗವಾಕ್ಷಿ ಯೋಜನೆ ತರುವ ಯೋಜನೆ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ.