ಬೆಳಗಾವಿ:ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯೆ ನೀಡಿದ್ದು ಜಗದೀಶ್ ಶೆಟ್ಟರ್ ಅಷ್ಟೇ ಅಲ್ಲ ಬಹಳಷ್ಟು ನಾಯಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರ್ಪಡೆ ಸುಳಿವು ಕೊಟ್ಟರು. ಜಗದೀಶ್ ಶೆಟ್ಟರ್ ಅವರು ಮರಳಿ ಗೂಡಿಗೆ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಘಟನೆಯ ನೋವಿನಿಂದ ಕಾಂಗ್ರೆಸ್ಗೆ ಹೋಗಿದ್ದರು. ಶೆಟ್ಟರ್ ಮತ್ತು ಅವರ ತಂದೆಯವರು ಬಿಜೆಪಿಯಲ್ಲಿದ್ದವರು. ಕಾಂಗ್ರೆಸ್ಗಿಂತ ಬಿಜೆಪಿಯಲ್ಲಿರುವುದು ಉತ್ತಮ ಎಂದು ಪಕ್ಷಕ್ಕೆ ಬಂದಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಬಹಳಷ್ಟು ಮಂದಿ ಬಿಜೆಪಿಗೆ ಬರಲಿದ್ದಾರೆ ಎಂದರು.
ಈಗಾಗಲೇ ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ರಾಜಕೀಯ ಭವಿಷ್ಯ ಭದ್ರವಾಗಿರಬೇಕೆಂದು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ. ಕರ್ನಾಟಕ ಪಕ್ಷದಲ್ಲಿ ಅಜಿತ್ ಪವಾರ್ ಇದ್ದಾರೆ, ಏಕನಾಥ್ ಶಿಂಧೆಯೂ ಇದ್ದಾರೆ. ಲೋಕಸಭೆ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಬಹಳಷ್ಟು ಶಾಸಕರು ಬಿಜೆಪಿಗೆ ಬಂದರೆ ತಾನಾಗಿಯೇ ರಾಜಕೀಯವಾಗಿ ಬದಲಾವಣೆ ಆಗುತ್ತದೆ. ಬಿಜೆಪಿ ಯಾವುದೇ ಆಫರ್ ಕೊಟ್ಟು ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಶಾಸಕರನ್ನು ಮಾತನಾಡಿಸುವುದಿಲ್ಲ ಎಂದು ಹೇಳಿದರು.