ಅಶ್ವತ್ಥನಾರಾಯಣ ಹೇಳಿಕೆ (ETV Bharat) ಬೆಂಗಳೂರು:''ವಾಲ್ಮೀಕಿ ನಿಗಮ ಹಗರಣ ಪ್ರಕರಣ ಸಂಬಂಧ ರಾಜ್ಯದಲ್ಲಿ ಜಾರಿ ನಿರ್ದೇಶನಾಲಯದ ದಾಳಿಯನ್ನು ಬಿಜೆಪಿ ಸ್ವಾಗತಿಸಲಿದ್ದು, ಸಿಎಂ ಸಿದ್ದರಾಮಯ್ಯ ಸೇರಿ ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೋ ಎಲ್ಲರ ವಿಚಾರಣೆ ನಡೆಸಬೇಕು'' ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ರಾಜ್ಯದಲ್ಲಿ ಕಾಂಗ್ರೆಸ್ ಕಂಡ ಕಂಡಲ್ಲಿ ಲೂಟಿ ಮಾಡಿದೆ. ವಾಲ್ಮೀಕಿ ನಿಗಮದ ಹಣ ನೇರವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಸಂಪೂರ್ಣ ಹಣ ನುಂಗಿದ್ದಾರೆ ಇದೆಲ್ಲಾ ಮನಿ ಲ್ಯಾಂಡ್ರಿಂಗ್ ಆ್ಯಕ್ಟ್ ನಡಿ ಬರಲಿದೆ, ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆ ಇ.ಡಿ ಮುಖ್ಯವಾಹಿನಿಗೆ ಬಂದಿದೆ. ಇಲ್ಲಿ ಮನಿ ಲಾಂಡ್ರಿಂಗ್ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಹಣ ವರ್ಗಾವಣೆಯನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ. ಹಣ ವಾಪಸ್ ಪಡೆಯುತ್ತೇವೆ ಎಂದಿದೆ. ಹಣ ಹೊರಟುಹೋಗಿದೆ ವಾಪಸ್ ತರಿಸಿಕೊಳ್ಳುತ್ತೇವೆ ಎಂದು ಯಾವುದಾದರೂ ಸರ್ಕಾರ ಹೇಳಿದ್ದು ನೋಡಿದ್ದೀರಾ? ಬಡ್ಡಿ ವ್ಯವಹಾರ ಮಾಡುತ್ತಾರಲ್ಲ. ಕೊಟ್ಟ ಹಣ ವಾಪಸ್ ಪಡೆಯುತ್ತೇವೆ ಎನ್ನುವಂತಿದೆ. ಮನಿ ಲ್ಯಾಂಡ್ರಿಂಗ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಈ ಸರ್ಕಾರ ಸಂಪೂರ್ಣವಾಗಿ ಮನಿ ಲ್ಯಾಂಡ್ರಿಂಗ್ ಮಾಡಿರುವ ಸರ್ಕಾರವಾಗಿದೆ'' ಎಂದು ದೂರಿದರು.
''ಹಗರಣದ ಹಬ್ಬ ಎಲ್ಲರ ಕುಣಿಕೆಗೂ ಬಂದಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಅವರ ಪಕ್ಷದ ಮೇಲಿನಿಂದ ಕೆಳಗಡೆ ಎಲ್ಲಾ ಕಡೆ ಹರಡಲಿದೆ. ಎಲ್ಲೆಲ್ಲಿ ಹಣ ಹೋಗಿದೆ. ಪುಣ್ಯಾತ್ಮರಿಗೆ ಎಲ್ಲೆಲ್ಲಿ ಹೋಗಿದೆ ಅವರನ್ನು ತಂದು ಬಂಧಿಸುವ ಕೆಲಸವಾಗಲಿ. ಹಣವನ್ನೂ ವಾಪಸ್ ತರಬೇಕಿದೆ'' ಎಂದು ಒತ್ತಾಯಿಸಿದರು.
''ಕಾಂಗ್ರೆಸ್ ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದು ಈಗ ಬಿಜೆಪಿ ಮೇಲೆ ಆರೋಪಿಸುತ್ತಿದೆ. ಲೂಟಿ ಹೊಡೆಯಲು ಬಿಜೆಪಿ ಹೇಳಿತ್ತಾ, ಉಪ್ಪು ತಿಂದಿದ್ದೀರಾ ನೀರಿ ಕುಡಿಯಿರಿ, ಸಿಎಂ ಸೇರಿಸಿ ಸಚಿವ ಸಂಪುಟವೇ ಹಣವನ್ನು ನುಂಗಿ ನೀರು ಕುಡಿಯುತ್ತಿದೆ. ಬಿಜೆಪಿ ಹಣ ಹೊಡೆಯಲು ಹೇಳಿತ್ತಾ, ತಪ್ಪು ಮಾಡಿದ್ದೀರಾ ತನಿಖೆ ಎದುರಿಸಿ. ಹಣ ವರ್ಗಾವಣೆಯಾಗಿದೆ ವಾಪಸ್ ಪಡೆಯಲಾಗುತ್ತಿದೆ ಎಂದು ನೀವೇ ಹೇಳಿದ್ದೀರಿ. ತಪ್ಪು ಆಗಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಾ ಇದರಲ್ಲಿ ತನಿಖೆಯಾಗಬಾರದು, ಈಗ ಇ.ಡಿ ತನಿಖೆಯಾಗಬಾರದು ಎನ್ನುವುದು ಯಾವ ನ್ಯಾಯ, ಬಿಜೆಪಿ ಮೇಲೆ ಬೆರಳು ತೋರಲು ಆತ್ಮಸಾಕ್ಷಿ ಇದೆಯಾ? ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಲ್ಲ. ಜನರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ದಲಿತರ ಹಣ ಲೂಟಿ ಹೊಡೆದ ಪ್ರತಿಯೊಬ್ಬರಿಗೂ ಶಿಕ್ಷೆಯಾಗಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಕುರಿತು ನೂರಕ್ಕೆ ನೂರು ವಿಶ್ವಾಸವಿದೆ'' ಎಂದರು.
''ಬಿಜೆಪಿಯವರೂ ಇದ್ದಾರೆ ಎನ್ನುವ ಆರೋಪವನ್ನು ಮಾಡಲಾಗುತ್ತಿದೆ. ಆದರೆ, ಇದರಲ್ಲಿ ಯಾರೇ ಇರಲಿ. ಎಲ್ಲೇ ಲೂಟಿ ಹೊಡೆದವರಿದ್ದರೂ ಎತ್ತಾಕಿಕೊಳ್ಳಿ. ಸಿಎಂ ಸೇರಿ ಯಾರೆಲ್ಲಾ ಇದರಲ್ಲಿ ಇದ್ದಾರೋ ವಿಚಾರಣೆ ನಡೆಸಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದರಲ್ಲಿ ಭಾಗಿಯಾಗಿದ್ದಾರೆ. ಯಾರು ಕಾಯಬೇಕಿತ್ತೋ ಅವರೇ ಭಕ್ಷಕರಾಗಿದ್ದಾರೆ. ಹಾಗಾಗಿ ಇ.ಡಿ ದಾಳಿ ಸ್ವಗತಾರ್ಹವಾಗಿದ್ದು, ಎಲ್ಲ ರೀತಿಯಲ್ಲಿಯೂ ತನಿಖೆ ನಡೆಸಿ ಸತ್ಯ ಹೊರತರಲಿ'' ಎಂದು ಹೇಳಿದರು.
ಇ.ಡಿ ದಾಳಿಗೆ ವಿಜಯೆಂದ್ರ ಸ್ವಾಗತ:''ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ಆಗಿದೆ. ಎಸ್ಐಟಿಯಿಂದ ನಾಗೇಂದ್ರ, ದದ್ದಲ್ ಅವರನ್ನು ವಿಚಾರಣೆಗೆ ಕರೆಯ್ಯುವದಕ್ಕೂ ಹಿಂಜರಿಯುತ್ತಿದ್ದರು ಪ್ರಕರಣದ ಸಿಬಿಐ ತನಿಖೆಯೂ ನಡೆಯುತ್ತಿದೆ. ಈಗ ಇ.ಡಿಯವರೂ ದಾಳಿ ಮಾಡಿದ್ದಾರೆ. ಇಡಿ ದಾಳಿಯನ್ನು ಬಿಜೆಪಿ ಸ್ವಾಗತಿಸುತ್ತದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಡಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಸಿಬಿಐ, ಇ.ಡಿಗಳಿಂದ ಸತ್ಯ ಹೊರಗೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹಗರಣಗಳ ವಿರುದ್ಧ ಉಭಯ ಸದನಗಳಲ್ಲಿ ಹೋರಾಟ: ಬಿಜೆಪಿ ನಿರ್ಧಾರ - BJP Leaders Meeting