ಬೆಂಗಳೂರು:ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಕೆಪಿಸಿಸಿ ಕಚೇರಿಯಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮದ ಮೂಲಕ ಇಂಧನ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ, ಪರಿಹಾರ ಕ್ರಮಗಳ ಕುರಿತು ಭರವಸೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಲಹೆಯಂತೆ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಸಚಿವರು, ಕಾರ್ಯಕರ್ತರು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಟ್ರಾನ್ಸ್ಫಾರ್ಮರ್ ಸಮಸ್ಯೆ, ಕುಸುಮ್ ಬಿ ಮತ್ತು ಕುಸುಮ್ ಸಿ ಅಡಿ ಅರ್ಜಿ ಸಲ್ಲಿಸುವುದು, ವಿದ್ಯುತ್ ಮಾರ್ಗಗಳ ಸ್ಥಳಾಂತರ, ಮಳೆಯಿಂದ ವಿದ್ಯುತ್ ಕಂಬ, ತಂತಿ ಮತ್ತು ಪರಿವರ್ತಕಗಳಿಗೆ ಹಾನಿಯಾಗಿ ವಿದ್ಯುತ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಸಚಿವರ ಮುಂದೆ ಅಹವಾಲುಗಳನ್ನು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಮಳೆಯಿಂದ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ತಂತಿಗಳನ್ನು ಸರಿಪಡಿಸಿ ವಿದ್ಯುತ್ ಮರು ಸ್ಥಾಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಟ್ರಾನ್ಸ್ಫಾರ್ಮರ್ಗಳನ್ನು ತಕ್ಷಣವೇ ದುರಸ್ತಿಗೊಳಿಸಿ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಲ ಭಾರೀ ಮಳೆಯಿಂದ ಸಮಸ್ಯೆ ಆಗಿದ್ದು, ಹೆಚ್ಚುವರಿ ಸಿಬ್ಬಂದಿ ನೇಮಿಸಿ ತಕ್ಷಣವೇ ಸರಿಪಡಿಸಲಾಗುತ್ತಿದೆ. ಇಲಾಖೆ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆಯೂ ಮಳೆ-ಗಾಳಿ ಮುಂದುವರಿದಿರುವುದರಿಂದ ಕೆಲವೆಡೆ ಇನ್ನೂ ಸಮಸ್ಯೆ ಮುಂದುವರಿದಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡು ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಮರುಸ್ಥಾಪನೆ ಮಾಡಲಾಗುತ್ತಿದೆ" ಎಂದು ಹೇಳಿದರು.