ಕರ್ನಾಟಕ

karnataka

ETV Bharat / state

ಸಿಬ್ಬಂದಿಯ ರಜೆ ನಗದೀಕರಣ ಸಾಂವಿಧಾನಿಕ ಹಕ್ಕು: ಹೈಕೋರ್ಟ್ - High Court - HIGH COURT

ಸಿಬ್ಬಂದಿಯ ರಜೆ ನಗದೀಕರಣ ಸಂವಿಧಾನದಡಿ ಲಭ್ಯವಿರುವ ಹಕ್ಕು ಎಂದಿರುವ ಹೈಕೋರ್ಟ್, ವ್ಯಕ್ತಿಯೊಬ್ಬರ ರಜೆ ನಗದೀಕರಣವನ್ನು ಶೇ.6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 6, 2024, 9:23 PM IST

ಬೆಂಗಳೂರು: ಸಿಬ್ಬಂದಿಯ ರಜೆ ನಗದೀಕರಣ ವಿವೇಚನೆಯ ಉಡುಗೊರೆ ಎಂಬುದಾಗಿ ಪರಿಗಣಿಸಲಾಗದು. ಅದೊಂದು ಸಂವಿಧಾನದಡಿ ಲಭ್ಯವಿರುವ ಕಾನೂನುಬದ್ಧ ಹಕ್ಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರಜೆ ನಗದೀಕರಣ ಮಾಡದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೆಚ್​.ಚನ್ನಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿತು.

ಪ್ರಕರಣವೇನು?: ವಾಟರ್‌ಮನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡದ ಹೆಚ್​.ಚನ್ನಯ್ಯ ಎಂಬವರಿಗೆ ಮೂರು ತಿಂಗಳಲ್ಲಿ 1.32 ಲಕ್ಷ ರೂ. ರಜೆ ನಗದೀಕರಣವನ್ನು ಶೇ.6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ಅರ್ಜಿದಾರರ ಸೇವಾ ದಾಖಲೆಗಳ ಬಗ್ಗೆ ಪ್ರತಿವಾದಿ ಆಕ್ಷೇಪ ಎತ್ತಿದ್ದಾರೆ. ಆದರೆ, ಅವರು ಹಲವು ವರ್ಷಗಳಿಂದ ನಾನಾ ಆಡಳಿತ ಘಟಕಗಳಡಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ನಂತರ ಅವರಿಗೆ ಪಿಂಚಣಿ ಭತ್ಯೆಗಳನ್ನು ನೀಡುವಂತೆ ಗ್ರಾಮ ಪಂಚಾಯಿತಿ ಆದೇಶಿಸಿದೆ ಎಂದು ಕೋರ್ಟ್ ಹೇಳಿದೆ.

ಗ್ರ್ಯಾಚುಟಿ ಪಾವತಿ ಕೂಡಾ ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿಲ್ಲ. ಅದು ಕಾನೂನುಬದ್ಧ ಹಕ್ಕು. ಪಿಂಚಣಿ, ಗ್ರ್ಯಾಚುಟಿ ಮತ್ತು ರಜೆ ನಗದೀಕರಣ ಸವಿಧಾನದ ಸೆಕ್ಷನ್ 19(1)(ಎಫ್​) ಮತ್ತು ಸೆಕ್ಷನ್ 31(1)ರಡಿ ಲಭ್ಯವಿರುವ ಮೂಲಭೂತ ಹಕ್ಕಿನ ಭಾಗ ಎಂಬುದಾಗಿ ದಿಯೋಕಿನಂದನ್ ಪ್ರಸಾದ್ ವರ್ಸಸ್ ಸ್ಟೇಟ್ ಆಫ್​ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಹಾಗಾಗಿ ಶಾಸನಬದ್ಧವಾಗಿದ್ದು, ರಜೆ ನಗದೀಕರಣ ನೀಡಬೇಕಾಗಿದೆ ಎಂದು ಆದೇಶಿಸಿದೆ.

ಸಂವಿಧಾನದಡಿ ನಾಗರಿಕರಿಗೆ ರಕ್ಷಣೆ ಇದೆ. ಅದರಂತೆ ಸಂವಿಧಾನದ ಕಲಂ 300ಎ ಅಡಿ ವ್ಯಕ್ತಿ ವೈಯಕ್ತಿಕವಾಗಿ ಆಸ್ತಿ ಹೊಂದುವುದನ್ನು ನಿರ್ಬಂಧಿಸುವಂತಿಲ್ಲ. ಅದರಲ್ಲಿ ಗಳಿಕೆ ರಜೆ ನಗದೀಕರಣವೂ ಸೇರಿದೆ. ಈ ರೀತಿ ರಜೆ ನಗದೀಕರಣ ತಡೆ ಹಿಡಿಯುವುದು ಅಸಾಂವಿಧಾನಿಕ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ಹೆಚ್.ಚನ್ನಯ್ಯ 1979ರಲ್ಲಿ ಪಾವಗಡ ಪಂಚಾಯಿತಿಯಲ್ಲಿ ವಾಟರ್‌ಮನ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆ ನಂತರ ಅವರು 2013ರಲ್ಲಿ ವಯೋಸಹಜ ನಿವೃತ್ತಿ ಹೊಂದಿದ್ದರು. ಬಳಿಕ ಅಕೌಂಟೆಂಟ್ ಜನರಲ್ ಕಚೇರಿ ಚನ್ನಯ್ಯ ಅವರ ಸೇವಾ ವಿವರ ಹಾಗೂ ಅವರಿಗೆ ನೀಡಬೇಕಾದ ಪಿಂಚಣಿ ವಿವರಗಳನ್ನು ಲೆಕ್ಕ ಹಾಕಿತ್ತು. ಅದೇ ರೀತಿ, ಜಿಲ್ಲಾ ಪಂಚಾಯ್ತಿ ಸಿಇಒ ಮತ್ತು ಪಾವಗಡ ತಾಲೂಕು ಪಂಚಾಯ್ತಿ ಅಧಿಕಾರಿಗೆ ಅರ್ಜಿದಾರರ ರಜೆ ನಗದೀಕರಣವನ್ನು ತ್ವರಿತವಾಗಿ ಇತ್ಯರ್ಥ ಮಾಡುವಂತೆ ನಿರ್ದೇಶನ ನೀಡಲಾಗಿತ್ತು.

ಆದರೆ, ಅರ್ಜಿದಾರರಿಗೆ ಪಾವತಿಸಬೇಕಾದ ಗಳಿಕೆ ರಜೆ ನಗದನ್ನು ಇತ್ಯರ್ಥಪಡಿಸಲಿಲ್ಲ. ಹಾಗಾಗಿ ಅರ್ಜಿದಾರರು ತಮಗೆ ಗಳಿಕೆ ರಜೆ ನಗದೀಕರಣ ಮಾಡಿಕೊಡುವಂತೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಪ್ರತಿವಾದಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಅರ್ಜಿದಾರರು ತಾತ್ಕಾಲಿಕ ನೌಕರರರಾಗಿದ್ದರು, ಅಲ್ಲದೆ, ಅವರು ಸೇವಾ ದಾಖಲೆಗಳ ಬಗ್ಗೆ ಸಂದೇಶಹವಿದೆ, ಅರ್ಜಿದಾರರು ಎಜಿ ಕಚೇರಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಅವರು ಆರಂಭದಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡಿದ್ದಕ್ಕೆ ದಾಖಲೆಗಳಲ್ಲಿ ಹೊಂದಿಕೆ ಆಗುತ್ತಿಲ್ಲ ಎಂದು ತಕರಾರು ಎತ್ತಿದ್ದರು.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್ ಕಾರಿಡಾರ್ ಮಾರ್ಗದಲ್ಲಿ ಮೇಲ್ಸೇತುವೆ ಮನವಿ ಪರಿಗಣಿಸಲು ಸೂಚಿಸಿದ ಹೈಕೋರ್ಟ್ - High Court

ABOUT THE AUTHOR

...view details