ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಸಾಕಾನೆ ಶಿಬಿರದಲ್ಲಿದ್ದ 46 ವಯಸ್ಸಿನ ಕುಮಾರಸ್ವಾಮಿ ಮೃತಪಟ್ಟಿದ್ದು, ಕಾಡಿನ ಒಳಭಾಗದಲ್ಲಿ ಕಳೇಬರ ಪತ್ತೆಯಾಗಿದೆ.
ಕುಮಾರಸ್ವಾಮಿ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಆಹಾರಕ್ಕಾಗಿ ನಿತ್ಯವೂ ಅರಣ್ಯಕ್ಕೆ ಬಿಡಲಾಗುತ್ತಿತ್ತು. ಈ ಮಧ್ಯೆ ಇತ್ತೀಚೆಗೆ ಕುಮಾರಸ್ವಾಮಿ ಕಾಡಿನಲ್ಲಿ ನಾಪತ್ತೆಯಾಗಿದೆ. ಇತ್ತ ಶಿಬಿರಕ್ಕೆ ಬಾರದ ಆನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರತೀದಿನ ಕೂಂಬಿಂಗ್ ಕಾರ್ಯಾಚರಣೆ ಮೂಲಕ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಡಿ.ಬಿ.ಕುಪ್ಪೆ ವಲಯದ ಆನೆ ಕಲ್ಲು ದಿಬ್ಬದ ದಾರಿಯ ಅರಣ್ಯ ಪ್ರದೇಶದಲ್ಲಿ ಕಳೇಬರ ಪತ್ತೆಯಾಗಿದೆ.
2001ರಲ್ಲಿ ಸೆರೆ ಸಿಕ್ಕ ಕುಮಾರಸ್ವಾಮಿ ಆನೆಯನ್ನು ಕೂಂಬಿಂಗ್ ಮತ್ತು ಇತರೆ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ನಾಗರಹೊಳೆಯ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದರು.
ನಿಯಮಾವಳಿಗಳಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ಸೋಂಕು ಉಂಟಾಗಿ ಮೃತಪಟ್ಟಿರುವುದಾಗಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಬಿ.ಪ್ರಸನ್ನ ತಿಳಿಸಿದ್ದಾರೆ. ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ರಂಗಸ್ವಾಮಿ, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಎಸ್.ಡಿ.ಮಧು ಹಾಗು ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ:ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ