ಸ್ವಾತಂತ್ರೋತ್ಸವಕ್ಕೆ ವಿದ್ಯುತ್ ದೀಪಗಳಲ್ಲಿ ಮಿರಿ ಮಿರಿ ಮಿಂಚಿದ ಬೆಳಗಾವಿಯ ಸುವರ್ಣ ವಿಧಾನಸೌಧ (ETV Bharat) ಬೆಳಗಾವಿ:78ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಝಗಮಗಿಸುವ ವಿದ್ಯುತ್ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತಿದೆ.
ಬೆಳಗಾವಿ ತಾಲೂಕಿನ ಹಲಗಾ-ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಉತ್ತರ ಕರ್ನಾಟಕದ ಶಕ್ತಿಸೌಧ ಸುವರ್ಣ ವಿಧಾನಸೌಧ ತ್ರಿವರ್ಣ ಬಣ್ಣದಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಬೆಳಗಾವಿ ಜಿಲ್ಲಾಡಳಿತದಿಂದ ಸೌಧಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ದೀಪಾಲಂಕಾರ ಮಾಡಲಾಗಿದ್ದು, ಈ ನಯನ ಮನೋಹರ ದೃಶ್ಯವನ್ನು ಕುಂದಾನಗರಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಿರಿ ಮಿರಿ ಮಿಂಚಿದ ಬೆಳಗಾವಿಯ ಸುವರ್ಣ ವಿಧಾನಸೌಧ (ETV Bharat) ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚರಿಸುವ ಜನರು ಸುವರ್ಣ ವಿಧಾನಸೌಧ ಮುಂದಿನ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಸೌಧದ ಬೆಳಕಿನ ಚಿತ್ತಾರವನ್ನು ಕಂಡು ಪುಳಕಿತರಾದರು. ತಮ್ಮ ಮೊಬೈಲಿನ ಕ್ಯಾಮರಾದಲ್ಲಿ ದೀಪಾಲಂಕಾರ ಸೆರೆ ಹಿಡಿದು ಸಂಭ್ರಮಿಸುವುದು ಸಾಮಾನ್ಯವಾಗಿತ್ತು.
ಇಂಗ್ಲೆಂಡ್ನಲ್ಲಿ ಆರ್ಥೋಪಿಡಿಕ್ಸ್ ವೈದ್ಯರಾಗಿರುವ ಸವದತ್ತಿ ಮೂಲದ ಡಾ.ಬಿ.ಸಿ. ನಾವದಗಿ ತಮ್ಮ ಕುಟುಂಬ ಸಮೇತ ಸೌಧದ ವಿದ್ಯುತ್ ದೀಪಾಲಂಕಾರ ನೋಡಿ ಸಂಭ್ರಮಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, "ಈ ವಿಹಂಗಮ ನೋಟ ನೋಡಿ ತುಂಬಾ ಖುಷಿ ಆಗುತ್ತಿದೆ. ಬಹಳ ಸುಂದರವಾಗಿ ಸುವರ್ಣಸೌಧ ಅಲಂಕರಿಸಿದ್ದಾರೆ. ಎಲ್ಲರೂ ಆಗಮಿಸಿ ಈ ದೃಶ್ಯವನ್ನು ಕಣ್ತುಂಬಿಕೊಳ್ಳಿ" ಎಂದರು.
ಮಿರಿ ಮಿರಿ ಮಿಂಚಿದ ಬೆಳಗಾವಿಯ ಸುವರ್ಣ ವಿಧಾನಸೌಧ (ETV Bharat) ಸೋನಾಲಿ ನಾವದಗಿ ಮಾತನಾಡಿ, "ಕಲರ್ ಕಲರ್ ಲೈಟಿಂಗ್ನಲ್ಲಿ ಸುವರ್ಣ ವಿಧಾನಸೌಧ ಮಿಂಚುತ್ತಿದೆ. ದೀಪಾಲಂಕಾರ ನೋಡಿ ತುಂಬಾ ಸಂತೋಷವಾಯಿತು. ಎಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ಹೇಳಿದರು.
ಮಿರಿ ಮಿರಿ ಮಿಂಚಿದ ಬೆಳಗಾವಿಯ ಸುವರ್ಣ ವಿಧಾನಸೌಧ (ETV Bharat) ಸುವರ್ಣ ವಿಧಾನಸೌಧ ಆವರಣದೊಳಗೆ ಹೋಗಿ, ಈ ದೀಪಾಲಂಕಾರ ನೋಡಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಒಳಗೆ ಅವಕಾಶ ನೀಡಿದ್ದರೆ ಹತ್ತಿರದಿಂದ ಸೌಧವನ್ನು ಬಣ್ಣ ಬಣ್ಣದ ದೀಪಗಳಲ್ಲಿ ನೋಡಿ ಆನಂದಿಸುತ್ತಿದ್ದರು ಎಂದು ಕೆಲ ಜನರು ಬೇಸರ ಹೊರ ಹಾಕಿದ್ದಾರೆ. ಇಂದಾದರೂ ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಬೆಂಗಳೂರು: ಅಂಬೇಡ್ಕರ್ ಜೀವನಾಧಾರಿತ ಲಾಲ್ಬಾಗ್ ಫ್ಲವರ್ಶೋಗೆ ಜನಸಾಗರ - Lal bagh Flower Show