ಬೆಂಗಳೂರು:ವಿಧಾನಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಜೂನ್ 3 ರಂದು ಮತದಾನ ನಡೆಯಲಿದೆ.
ಬೆಂಗಳೂರು ಪದವೀಧರ ಕ್ಷೇತ್ರ, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ, ಕರ್ನಾಟಕ ನೈರುತ್ಯ, ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 3 ರಂದು ಚುನಾವಣೆ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ಇರಲಿದೆ.
ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ್ ಪಾಟೀಲ್, ಅಯನೂರು ಮಂಜುನಾಥ್, ಎ. ದೇವೇಗೌಡ ಹಾಗೂ ಶಿಕ್ಷಕರ ಕ್ಷೇತ್ರದಿಂದ ವೈ.ಎ. ನಾರಾಯಣಸ್ವಾಮಿ, ಎಸ್. ಎಲ್. ಭೋಜೇಗೌಡ ಹಾಗೂ ಮರಿತಿಬ್ಬೇಗೌಡ ಅವರ ವಿಧಾನಪರಿಷತ್ ಅವಧಿ ಜೂನ್ 21ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಮೇ 17ಕ್ಕೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 20 ಕೊನೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4 ವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ವಿಜಯಪುರದಲ್ಲಿ 'ಡಬಲ್ ಹ್ಯಾಟ್ರಿಕ್' ಸರದಾರ ಜಿಗಜಿಣಗಿಗೆ ಸವಾಲೊಡ್ಡುವುದೇ ಕಾಂಗ್ರೆಸ್? - Vijayapura Constituency Profile