ಚಿಕ್ಕಮಗಳೂರು: ತಾಲೂಕಿನ ಮಾಗಡಿ ಚೆಕ್ ಪೋಸ್ಟ್ನಲ್ಲಿ ಸರ್ಕಾರಿ ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಸುಮಾರು ಅರ್ಧ ಕೆಜಿ ಬಂಗಾರವನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜಿಲ್ಲೆಯ ಅಜ್ಜಂಪುರ, ಮೂಡಿಗೆರೆ ತಾಲೂಕಿನಲ್ಲೂ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 4 ಲಕ್ಷಕ್ಕೂ ಹೆಚ್ಚು ನಗದನ್ನು ಅಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಮಾಗಡಿ ಚೆಕ್ ಪೋಸ್ಟ್ನಲ್ಲಿ ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಚಿನ್ನದ ತಾಳಿ, ನೆಕ್ಲೇಸ್, ಬ್ರಾಸ್ಲೈಟ್, ಬಳೆ, ಸರ, ಉಂಗುರಗಳುಳ್ಳ ಅರ್ಧ ಕೆಜಿಯಷ್ಟು ಚಿನ್ನಾಭರಣಗಳನ್ನ ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡದ ಹಿನ್ನೆಲೆ ಆಭರಣಗಳನ್ನು ಸೀಜ್ ಮಾಡಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಲಕ್ಷಾಂತರ ಮೌಲ್ಯದ್ದು ಎಂದು ಅಧಿಕಾರಿಗಳ ತಂಡ ಅಂದಾಜಿಸಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇನ್ನು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ಕೆಬೈಲ್ ಚೆಕ್ ಪೋಸ್ಟ್ನಲ್ಲಿ ಸಹ ವಾಹನವೊಂದರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3 ಲಕ್ಷದ 62,750 ರೂ. ನಗದು, ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ 1 ಲಕ್ಷ ರೂ., ಹಾಗೂ ಅಹ್ಮದ್ ನಗರದ ಚೆಕ್ ಪೋಸ್ಟ್ನಲ್ಲಿ 1.30 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.